Hulunbuir (China): ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಂಗಳವಾರ ಚೀನಾ ವಿರುದ್ಧ ನಡೆದ ಫೈನಲ್‌ನಲ್ಲಿ 1-0 ಗೋಲಿನಿಂದ ಗೆಲುವು ಸಾಧಿಸಿದ ಭಾರತ, 5ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು.
ಭಾರತ, ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯ ಗಳನ್ನು ಗೆದ್ದು ಅಜೇಯವಾಗಿ ಟ್ರೋಫಿಗೆ ಮುತ್ತಿಟ್ಟಿತು. ಡಿಫೆಂಡರ್ ಜುಗರಾಜ್ ಸಿಂಗ್ ಅಪರೂಪದ ಫೀಲ್ಡ್ ಗೋಲು, ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿತು. ಹರ್ಮನ್‌ಪ್ರೀತ್ ಸಿಂಗ್ ಪಡೆಗೆ ಫೈನಲ್ ಗೆಲುವು ಅಷ್ಟು ಸುಲಭವಾಗಿ ದಕ್ಕಲಿಲ್ಲ. ಪಂದ್ಯದ ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಚೀನಾದ ರಕ್ಷಣಾ ಪಡೆ ಯನ್ನು ಭೇದಿಸಲು ಭಾರತೀಯರಿಗೆ ಸಾಧ್ಯವಾಗಲಿಲ್ಲ. ಕೊನೆಗೂ 51ನೇ ನಿಮಿಷದಲ್ಲಿ ಜುಗರಾಜ್ ಗೋಲು ಬಾರಿಸಿದರು. ಆ ಗೋಲು ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ಭಾರತಕ್ಕೆ ಗೆಲುವಿನ ಗೋಲಾಯಿತು.
2011ರ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ, 2016ರಲ್ಲಿ 2ನೇ ಬಾರಿಗೆ ಪ್ರಶಸ್ತಿ ಜಯಿಸಿತ್ತು. 2018ರಲ್ಲಿ ಪಾಕಿಸ್ತಾನದೊಂದಿಗೆ ಟ್ರೋಫಿ ಹಂಚಿಕೊಂಡಿದ್ದ ಭಾರತ, 2023ರಲ್ಲಿ ಚೆನ್ನೈನಲ್ಲಿ ನಡೆದ ಟೂರ್ನಿಯಲ್ಲಿ 4ನೇ ಬಾರಿಗೆ ಚಾಂಪಿಯನ್ ಆಗಿತ್ತು. ಇದೀಗ 5ನೇ ಸಲ ಪ್ರಶಸ್ತಿ ಗೆದ್ದು, ಟೂರ್ನಿ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಚಾಂಪಿಯನ್ ಆದ ತಂಡ ಎನ್ನುವ ದಾಖಲೆಯನ್ನು ಮುಂದುವರಿಸಿದೆ. ಪಾಕಿಸ್ತಾನ 3, ದ.ಕೊರಿಯಾ 1 ಬಾರಿ ಗೆದ್ದಿದೆ.
ಭಾರತ ಚಾಂಪಿಯನ್ ಆಗುತ್ತಿದ್ದಂತೆ ಹಾಕಿ ಇಂಡಿಯಾ ನಗದು ಬಹುಮಾನ ಘೋಷಿಸಿತು. ಪ್ರತಿ ಆಟಗಾರರಿಗೆ ₹3 ಲಕ್ಷ ಹಾಗೂ ಪ್ರತಿ ಸಹಾಯಕ ಸಿಬ್ಬಂದಿಗೆ ₹1.5 ಲಕ್ಷ ಬಹುಮಾನ ನೀಡುವುದಾಗಿ ಪ್ರಕಟಿಸಿದೆ.