KGF, Kolar : ಕೇಂದ್ರ ಸರ್ಕಾರಿ ಸ್ವಾಮ್ಯದ BEML ಕಾರ್ಖಾನೆಯ ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ನಾಲ್ಕು ದಿನಗಳಿಂದ ಕಾರ್ಖಾನೆಯ ವಿವಿಧ ಪ್ರವೇಶ ದ್ವಾರದಲ್ಲಿ ಕಾರ್ಮಿಕರು ಘೋಷಣೆ ಕೂಗುವ ಪ್ರತಿಭಟನೆ (Protest) ಹಮ್ಮಿಕೊಂಡಿದ್ದರು. ಕೊನೆಯ ದಿನವಾದ ಶನಿವಾರದಂದು ಕಾರ್ಮಿಕ ಸಂಘದ ಪದಾಧಿಕಾರಿಗಳ ಜೊತೆಗೆ ಸಾವಿರಾರು ಬೆಮಲ್ ಕಾರ್ಮಿಕರು ಭಾಗವಹಿಸಿ ಮುಂಜಾನೆ ಕಾರ್ಖಾನೆ ಮುಂಭಾಗ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.
ಸುಮಾರು ಆರು ದಶಕಗಳ ಕಾಲ ಕಾರ್ಮಿಕರು ಬೆವರು ಸುರಿಸಿ ಕಟ್ಟಿದ ಕಾರ್ಖಾನೆ ಲಾಭದಾಯಕವಾಗಿ ನಡೆಯುತ್ತಿದ್ದು ವಾರ್ಷಿಕ ₹ 4,500 ಕೋಟಿ ವ್ಯವಹಾರ ನಡೆಸುತ್ತಿದೆ. ಖಾಸಗಿ ವಲಯದ ಪ್ರಭಾವಿಗಳ ಮರ್ಜಿಗೆ ಒಳಪಟ್ಟು ಕೇಂದ್ರ ಸರ್ಕಾರ ಲಾಭದಲ್ಲಿ ನಡೆಯುತ್ತಿರುವ ಬೆಮಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ರಯತ್ನ ನಡೆಯುತ್ತಿದೆ. ಬೆಮಲ್ ಮಾರಾಟಕ್ಕಿಲ್ಲ, ನಾವು ಕಟ್ಟಿ ಬೆಳೆಸಿದ ಬೆಮಲ್ ಅನ್ಯರ ಪಾಲಾಗಲು ಬಿಡುವುದಿಲ್ಲ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬೆಮಲ್‌ನ ಜಮೀನನ್ನು ಅತ್ಯಂತ ಕಡಿಮೆ ಬೆಲೆಗೆ ಖಾಸಗಿಯವರಿಗೆ ಮಾರಾಟ ಮಾಡುವ ಹುನ್ನಾರ ಇದ್ದಾಗಿದ್ದು ಕಾರ್ಮಿಕರು ತಮ್ಮ ಹಕ್ಕನ್ನು ಬಿಟ್ಟುಕೊಡಬಾರದು ಎಂದು ಬೆಮಲ್ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯ ರೆಡ್ಡಿ ತಿಳಿಸಿದರು.
ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಗಣೇಶ್‌ಕುಮಾರ್, ಓ. ರಾಮಚಂದ್ರರೆಡ್ಡಿ, ಆನಂದ, ಗೋಪಿ, ಗೋಪಾಲಕೃಷ್ಣ, ಲೋಕೇಶ್ ಮತ್ತು ಸೋಮನಾಥ ಮರಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.