Bagalkot: ಬಾಗಲಕೋಟೆ ಜಿಲ್ಲೆಯಲ್ಲಿ ಕ್ಷೀರ ಭಾಗ್ಯ (Ksheera Bhagya scam) ಯೋಜನೆಯ ಹಾಲಿನ ಪುಡಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 18 ಲಕ್ಷ ರೂಪಾಯಿ ಮೌಲ್ಯದ ಹಾಲಿನ ಪುಡಿ, ರಾಗಿ ಹಿಟ್ಟು ಮತ್ತು ಎಣ್ಣೆಯನ್ನು ಜಪ್ತಿ ಮಾಡಲಾಗಿದೆ.
127 ಮುಖ್ಯೋಪಾಧ್ಯಾಯರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಅಕ್ರಮದಲ್ಲಿ ಕೆಲವು ಶಿಕ್ಷಕರೂ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ, ಇದು ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.
ಅಕ್ಟೋಬರ್ 5ರಂದು ಬಾದಾಮಿ ತಾಲ್ಲೂಕಿನ ಸೂಳಿಕೇರಿ ಗ್ರಾಮದಲ್ಲಿ ದಾಳಿ ನಡೆಸಿ ಟನ್ ಗಟ್ಟಲೆ ಹಾಲಿನ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ದಾಳಿ ವೇಳೆ ಸಿದ್ದಪ್ಪ ಎಂಬಾತನನ್ನು ಬಂಧಿಸಿ, ಅವನು ಕೆಲವು ಶಾಲೆಗಳಿಂದ ಹಾಲು ಪ್ಯಾಕೆಟ್‌ಗಳನ್ನು ಹೇಗೆ ಪಡೆಯುತ್ತಿದ್ದನೆಂದು ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಹಾಲು ಪೂರೈಕೆಗಾಗಿ ಟೆಂಡರ್ ಪಡೆದಿದ್ದ ಶ್ರೀಶೈಲ್ ಅಂಗಡಿ ಈ ಅಕ್ರಮದ ಪ್ರಮುಖ ಆರೋಪಿಯಾಗಿದ್ದು, ಮಹಾರಾಷ್ಟ್ರಕ್ಕೆ ಹಾಲು ಮತ್ತು ಆಹಾರ ಸಾಮಗ್ರಿ ಸಾಗಿಸುತ್ತಿದ್ದ. ಈಗಾಗಲೇ ಆತನ ವಿರುದ್ಧ FIR ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ 127 ಮಂದಿ ಮುಖ್ಯಶಿಕ್ಷಕರಿಗೆ ನೋಟಿಸ್ ನೀಡಲಾಗಿದ್ದು, 27 ಜನ ಮಾತ್ರ ವಿಚಾರಣೆಗೆ ಹಾಜರಾಗಿದ್ದಾರೆ. ಮಕ್ಕಳ ಪೌಷ್ಠಿಕತೆ ಕಾರ್ಯಕ್ರಮಕ್ಕೆ ಕನ್ನ ಹಾಕಿರುವುದು ಸರ್ಕಾರದ ಮಹತ್ವದ ಯೋಜನೆಗೆ ತೀವ್ರ ಹಾನಿ ಮಾಡುತ್ತಿದೆ. ಸ್ಥಳೀಯರು ಶಿಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.