Mandya : ಮಂಡ್ಯ ಜಿಲ್ಲೆಯ ಕೆರಗೋಡು ಸಮೀಪದ ಕಲ್ಮಂಟಿದೊಡ್ಡಿ ಹಾಗೂ ಕೆರಗೋಡು ದಾಖ್ಲೆ ಗ್ರಾಮಗಳ ವ್ಯಾಪ್ತಿಗೆ ಸೇರಿದ ಶಕ್ತಿದೇವತೆ ಹಿರಿಯಮ್ಮ ದೇವಿಯ (Hiriyamma Devi Temple) ಕೊಂಡ ಬಂಡಿ ಉತ್ಸವ (Konda Bandi Utsava) ಸಂಭ್ರಮದಿಂದ ಕಲ್ಮಂಟಿದೊಡ್ಡಿ ಗ್ರಾಮದಲ್ಲಿ ನಡೆಯಿತು. 200 ವರ್ಷಗಳ ಹಿಂದೆ ನಡೆದಿದ್ದ ಹಬ್ಬವನ್ನು ಮತ್ತೆ ಆಚರಿಸಲು ದೇವರ ಕುಲದವರು ನಿರ್ಧರಿಸಿದ್ದು ಗ್ರಾಮದಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಕೊಂಡಬಂಡಿ ಹಬ್ಬ ನಡೆಸಲು ನಿರ್ಧರಿಸಿದ ಗ್ರಾಮಸ್ಥರು ದೇವಾಲಯಕ್ಕೆ ನೂತನ ಗುಡ್ಡಪ್ಪನನ್ನು ನೇಮಿಸಿದ್ದರು.
ದೇವಾಲಯದ ಆವರಣದಲ್ಲಿ ಹಬ್ಬಕ್ಕೂ ಮುನ್ನ ಕಂಬ ನೆಟ್ಟು, ದೇವಿಗೆ ವಿವಿಧ ಪೂಜೆ ನಡೆಸಲಾಯಿತು. ಗ್ರಾಮಸ್ಥರು ರಂಗಕುಣಿತ ಮಾಡಿದರು. ಕೊಂಡೋತ್ಸವಕ್ಕೆ ಸೌದೆಯನ್ನು ಸಂಗ್ರಹಿಸಿ, ಹೋಮ, ಹವನ ನಡೆಸಿದರು. ಸಂಜೆ ದೇವರ ಗುಡ್ಡಪ್ಪರನ್ನು ಹೊತ್ತ ಮೂರು ಬಂಡಿಗಳು ದೇವಾಲಯದ ಸುತ್ತ ಮೂರು ಪ್ರದಕ್ಷಿಣೆ ಹಾಕಿದವು.
ಕೆರಗೋಡು ಗ್ರಾಮದ ಪಂಚಲಿಂಗೇಶ್ವರ ದೇವಾಲಯದ ಬಳಿ ಹಿರಿಯಮ್ಮ, ಪಟ್ಟಲದಮ್ಮ, ದೈತ್ಯಮ್ಮ ಹಾಗೂ ಅರಸಮ್ಮ ದೇವಿಗೆ ಹೂ ಹೊಂಬಾಳೆ ಕಟ್ಟಿ ದೇವಾಲಯಕ್ಕೆ ಬರುವವರೆಗೂ ತಮಟೆ ಸದ್ದು, ಪಟಾಕಿ ಸಿಡಿಸಿ ಭಕ್ತರು ಸಂಭ್ರಮಿಸಿದರು. ಮೆರವಣಿಗೆ ಮೂಲಕ ದೇವರ ಪೂಜೆ ಹೊತ್ತ ಗುಡ್ಡರು ದೇವಾಲಯದ ಆವರಣಕ್ಕೆ ಬಂದು ಕೊಂಡ ಹಾದರು.