Mysuru: ಹೆಮ್ಮೆಯ ಸಾಂಸ್ಕೃತಿಕ ಹಬ್ಬ ‘ಮೈಸೂರು ದಸರಾ’ವನ್ನು (Mysuru Dasara Film Festival) ಸೆಪ್ಟೆಂಬರ್ 22 ರಿಂದ 11 ದಿನಗಳ ಕಾಲ ಆಚರಿಸಲು ನಗರ ಸಜ್ಜಾಗಿದೆ. ಈ ದಸರಾ ಹಬ್ಬದ ಅಂಗವಾಗಿ ‘ದಸರಾ ಚಲನಚಿತ್ರೋತ್ಸವ’ ಉಪಸಮಿತಿ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಿತು. ಇಂದು (ಗುರುವಾರ) ನಗರ ಮಾಲ್ ಆಫ್ ಮೈಸೂರಿನ ಐನಾಕ್ಸ್ ಮಲ್ಟಿಫ್ಲೆಕ್ಸ್ನಲ್ಲಿ ಪ್ರದರ್ಶನ ಕಂಡ ಕಿರುಚಿತ್ರಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಸುತನ್ ನಿರ್ದೇಶನದ ‘ಲಕುಮಿ’ ಕಿರುಚಿತ್ರಕ್ಕೆ ಪ್ರಥಮ ಬಹುಮಾನ ಹಾಗೂ 20 ಸಾವಿರ ರೂಪಾಯಿ ಗೌರವಧನ, ಮಣಿಕಂಠ ನಿರ್ದೇಶನದ ‘ಹಿಂಬಾಲಿಸು’ ಚಿತ್ರಕ್ಕೆ ಎರಡನೇ ಬಹುಮಾನ ಹಾಗೂ 15 ಸಾವಿರ ರೂಪಾಯಿ, ಶಶಿಕುಮಾರ್ ಡಿ.ಎಸ್. ನಿರ್ದೇಶನದ ‘ಹಬ್ಬದ ಹಸಿವು’ ಚಿತ್ರಕ್ಕೆ ಮೂರನೇ ಬಹುಮಾನ ಹಾಗೂ 10 ಸಾವಿರ ರೂಪಾಯಿ ಗೌರವಧನ ನೀಡಲಾಯಿತು. ‘ಲಕುಮಿ’ ಕಿರುಚಿತ್ರಕ್ಕೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ, ‘ಹಿಂಬಾಲಿಸು’ಗೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ನೀಡಲಾಯಿತು.
ಮುಖ್ಯ ಅತಿಥಿ ಕಿರುತೆರೆ ನಟಿ ದೀಪಾ ರವಿಶಂಕರ್ ಹೇಳಿದರು: “ಪ್ರಶಸ್ತಿ ಸಿಗದವರು ಬೇಸರವಾಗಬೇಡಿ. ಕಡಿಮೆ ಸಮಯದಲ್ಲಿ ಸಂದೇಶ ಸಾರುವ ಕಿರುಚಿತ್ರ ಮಾಡುವುದು ಕಷ್ಟ. ಇದಕ್ಕೆ ಶ್ರದ್ಧೆ ಬಹಳ ಮುಖ್ಯ. ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಕಿರುಚಿತ್ರಗಳನ್ನು ಇನ್ನೂ ಹೆಚ್ಚು ಮಾಡಿ.”
ಕಾರ್ಯಕ್ರಮದಲ್ಲಿ ಕಿರುತೆರೆ ನಟ ಅಶ್ವಿನ್ ಕುಮಾರ್ ಮತ್ತು ಹಿರಿಯ ಛಾಯಾಗ್ರಾಹಕ ಅಶ್ವತ್ ನಾರಾಯಣ ಅವರನ್ನು ಉಪಸಮಿತಿ ಸನ್ಮಾನಿಸಿತು. ಚಲನಚಿತ್ರ ಉಪಸಮಿತಿ ಉಪಾಧ್ಯಕ್ಷರಾದ ಸಿದ್ಧರಾಜು, ವಿಶೇಷಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್, ತೀರ್ಪುಗಾರರು ಹಾಗೂ ಉಪ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
34 ಕಿರುಚಿತ್ರಗಳಲ್ಲಿ ಆಯ್ಕೆಗೊಂಡ ಪ್ರಮುಖ ಕಿರುಚಿತ್ರಗಳು ಹೀಗಿವೆ: ‘ಹಿಂಬಾಲಿಸು’, ‘ಆ ಕ್ಷಣ’, ‘ಅದೃಷ್ಟ ಲಕ್ಷ್ಮೀ’, ‘ಮಾರ್ವೆನ್’, ‘ನನ್ನ ಪ್ರಪಂಚ’, ‘ಹಬ್ಬದ ಹಸಿವು’, ‘ಕಾಲಾಂತರ’, ‘ಎರ್ಡ್ರೂಪಾಯಿ’, ‘ಲಕುಮಿ’, ‘ಸೆಕ್ಸ್ ಟಾಯ್’. ಈ ಸ್ಪರ್ಧೆಯಲ್ಲಿ ಗೆದ್ದ 3 ಕಿರುಚಿತ್ರಗಳಿಗೆ ಪ್ರಮಾಣಪತ್ರ ಹಾಗೂ ನಗದು ಬಹುಮಾನ ನೀಡಲಾಯಿತು.







