Bengaluru : ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ (Agriculture University) ಆವರಣದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಪ್ರಚಾರ ಇಲಾಖೆ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಸಹಯೋಗದಲ್ಲಿ 13 ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (Bengaluru International Film Festival) ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “2022–23ರಲ್ಲಿ ಮೈಸೂರಿನಲ್ಲಿ ಚಿತ್ರನಗರಿ ಅನುಷ್ಠಾನ ಮಾಡುತ್ತೇವೆ. ಚಲನಚಿತ್ರ ಅಕಾಡೆಮಿಯಲ್ಲಿ 300 ಆಸನಗಳ ಚಿತ್ರಪ್ರದರ್ಶನ ಮಂದಿರವನ್ನು ಪೂರ್ಣ ಗೊಳಿಸಲು ₹ 15 ಕೋಟಿ ರೂಪಾಯಿ ಅನುದಾನದ ಬೇಡಿಕೆಯಿದೆ. ಅದನ್ನೂ ಈಡೇರಿಸುತ್ತೇನೆ. ಭಾರತದಲ್ಲಿ ಫಿಯಾಫ್ (FIAPF) ಮಾನ್ಯತೆ ಪಡೆದ ಪೈಕಿ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಐದನೆಯದು. ಆದರೆ, ಗುಣಮಟ್ಟದಲ್ಲಿ ಅದು ಮೊದಲ ಸ್ಥಾನದಲ್ಲಿರಬೇಕು. ಪ್ರತಿ ವರ್ಷ ಮಾರ್ಚ್ 3 ರಂದು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುವುದು” ಎಂದು ಹೇಳಿದರು.
‘ಈ ಚಿತ್ರೋತ್ಸವವನ್ನು ಪುನೀತ್‌ಗೆ ಅರ್ಪಿಸಿ’ ಎಂದು ಚಿತ್ರೋತ್ಸವದ ಸಾಂಕೇತಿಕ ಚಿತ್ರ (ಸಿಗ್ನೇಚರ್ ಫಿಲ್ಮ್) ಉದ್ಘಾಟಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಪ್ರಿಯದರ್ಶನ್ ಕೋರಿದರು.
ಕಾರ್ಯಕ್ರಮದಲ್ಲಿ ನಟಿ ಭಾರತಿ ವಿಷ್ಣುವರ್ಧನ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ತೋಟಗಾರಿಕೆ ಸಚಿವ ಮುನಿರತ್ನ, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಆಯುಕ್ತ ಡಾ.ಪಿ.ಎಸ್. ಹರ್ಷ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಉಪಸ್ಥಿತರಿದ್ದರು.