Mysuru : ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ನಿತ್ಯವೂ ಪೊಲೀಸ್ ಬ್ಯಾಂಡ್ (Police Music Band) ಕಾರ್ಯಕ್ರಮ ಆಯೋಜಿಸಲು ಅರಮನೆ (Mysore Palace) ಮಂಡಳಿ ನಿರ್ಧರಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (S. T. Somashekhar) ಅವರು ಭಾನುವಾರ ಬ್ಯಾಂಡ್ ನುಡಿಸಿ ಚಾಲನೆ ನೀಡಿದರು. ವಾರಾಂತ್ಯ ಮತ್ತು ವಿಶೇಷ ಸಂದರ್ಭಗಳಲ್ಲಿ ಮಾತ್ರ ಪೊಲೀಸ್ ಬ್ಯಾಂಡ್ ಕೇಳಬಹುದಿತ್ತು ಇನ್ನು ಮುಂದೆ ದಿನ ಸಂಜೆ 5 ರಿಂದ 6 ರ ವರೆಗೆ ಒಂದು ದಿನ ಕರ್ನಾಟಕ ಶಾಸ್ತ್ರೀಯ ಬ್ಯಾಂಡ್ (Karnataka Classical Music) ವಾದನ ಇದ್ದರೆ, ಇನ್ನೊಂದು ದಿನ ಇಂಗ್ಲಿಷ್ ಬ್ಯಾಂಡ್ ತಂಡದವರು ಸಂಗೀತ ನುಡಿಸಲಿದ್ದಾರೆ. ಮೊದಲ ದಿನ ಮಂಜುನಾಥ್ ನೇತೃತ್ವದ ಇಂಗ್ಲಿಷ್ ಬ್ಯಾಂಡ್ (English Band) ಮತ್ತು ಆರ್.ಮೋಹನ್ ನೇತೃತ್ವದ ಕರ್ನಾಟಕ ಬ್ಯಾಂಡ್ ತಂಡದವರು ವಿವಿಧ ರಾಗಗಳನ್ನು ನುಡಿಸಿ ನೆರೆದವರನ್ನು ರಂಜಿಸಿದರು.
ಅರಮನೆ ಭೇಟಿಗೆ ಬರುವವರಿಗೆ ರಾತ್ರಿಯವರೆಗೂ ಮನರಂಜನೆ ದೊರೆಯಬೇಕು ಎಂಬ ಉದ್ದೇಶದಿಂದ ನಿತ್ಯವೂ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ಇರಲಿದೆ ಎಂದು ಸಚಿವರು ತಿಳಿಸಿದರು.
ಮೈಸೂರು ಅರಮನೆ ಬ್ಯಾಂಡ್ ಗೆ 103 ವರ್ಷಗಳ ಇತಿಹಾಸವಿದ್ದು ಇಡೀ ದೇಶದಲ್ಲಿ ತನ್ನದೇ ಆದ ಗೌರವ ಪಡೆದುಕೊಂಡಿದೆ. ಮೈಸೂರಿನ ಅರಸರು ಪಾಶ್ಚಾತ್ಯ ಸಂಗೀತದ ಜತೆಯಲ್ಲಿ ಶಾಸ್ತ್ರೀಯ ಸಂಗೀತವನ್ನು ಸಮ್ಮಿಳಿತಗೊಳಿಸುವ ಕೆಲಸವನ್ನು ಮಾಡಿದ್ದಾರೆ. 1951 ರಲ್ಲಿ ಸರ್ಕಾರವು ಬ್ಯಾಂಡ್ ನುಡಿಸುವ ಹೊಣೆಯನ್ನು ಪೊಲೀಸ್ ಇಲಾಖೆಗೆ ವಹಿಸಿಕೊಟ್ಟಿತು. ಅಂದಿನಿಂದ ಇಂದಿನವರೆಗೂ ಪೊಲೀಸ್ ವಾದ್ಯ ತಂಡದವರು ಕಾರ್ಯಕ್ರಮ ನೀಡುತ್ತಿದ್ದಾರೆ. ಪೊಲೀಸ್ ಬ್ಯಾಂಡ್ ನಿತ್ಯ ಇರುವುದರಿಂದ ಪ್ರವಾಸಿಗರನ್ನು ಆಕರ್ಷಿಸಬಹುದು’ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.
ಶಾಸಕ ಎಲ್.ನಾಗೇಂದ್ರ, ಉಪಮೇಯರ್ ಅನ್ವರ್ ಬೇಗ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಕಾಡಾ ಅಧ್ಯಕ್ಷ ಎನ್.ಶಿವಲಿಂಗಯ್ಯ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ಅಧ್ಯಕ್ಷ ಅಪ್ಪಣ್ಣ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಫಣೀಶ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್‌ಗುಂಟಿ, ಗೀತಾ ಪ್ರಸನ್ನ, ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೀಶ್, ಮುಡಾ ಆಯುಕ್ತ ಡಿ.ಬಿ.ನಟೇಶ್, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.