Mysuru : ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ರೈತ ದಿನಾಚರಣೆ (Kisan Diwas, Farmers Day) ಅಂಗವಾಗಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ರೈತ ಸಮಾವೇಶವನ್ನು (Karnataka State Farmers Convention) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka Chief Minister Basavaraj Bommai) ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು “ರೈತರ ಧ್ವನಿಯಾಗಿ ಇಲ್ಲಿಗೆ ಬಂದಿದ್ದೇನೆ, ಹಲವಾರು ವರ್ಷಗಳಿಂದ ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಇಚ್ಛಾಶಕ್ತಿ ನಮ್ಮಲ್ಲಿ ಇದೆ. ದೇವರು ಅದಕ್ಕೆ ತಕ್ಕಂತೆ ಆರ್ಥಿಕ ಶಕ್ತಿ ನೀಡಿದರೆ ಸಮಯ ವ್ಯರ್ಥಿಸದೆ ರೈತರ ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸಲಾಗುವುದು.ಎಲ್ಲಾ ರಾಜಕೀಯ ಪಕ್ಷಗಳು ರೈತರು ನಮಗೆ ಸೇರಿದವರು ಎಂಬ ಸತ್ಯವನ್ನು ಅರಿತು ಕೆಲಸ ಮಾಡಿದರೆ ಯಾವುದೇ ಸರ್ಕಾರ ಬಂದರೂ ರೈತರ ಕಲ್ಯಾಣ ಸಾಧ್ಯ” ಎಂದು ಹೇಳಿದರು
ಆತ್ಮಹತ್ಯೆಯೇ ಎಲ್ಲದಕ್ಕೂ ಪರಿಹಾರ ಅಲ್ಲ. ರೈತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಅತಿವೃಷ್ಟಿ, ಅನಾವೃಷ್ಟಿ ಆದಾಗ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ರೈತ ಸಂಘಟನೆಗಳು ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ‘ಹಸಿರು ಹೊನ್ನು’ ಸ್ಮರಣ ಸಂಚಿಕೆ ಮತ್ತು ರೈತಧ್ವನಿ ವಿಶೇಷಾಂಕವನ್ನು ಬಿಡುಗಡೆಗೊಳ್ಳಿಸಿದರು. ರೈತಪರ ಹೋರಾಟದಲ್ಲಿ 40 ವರ್ಷ ಪೂರೈಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ರೈತರ ಆದಾಯ ದ್ವಿಗುಣ ಸಮಿತಿ ಮುಖ್ಯಸ್ಥ ಅಶೋಕ್ ದಳವಾಯಿ, ಪತ್ರಕರ್ತರಾದ ಎಚ್.ಆರ್.ರಂಗನಾಥ್, ರವಿ ಹೆಗ್ಡೆ, ರೈತ ಮುಖಂಡ ಟಿ.ವಿ.ಗೋಪಿನಾಥ, ವಿಶ್ವ ರೈತ ದಿನಾಚರಣೆ ಸಮಿತಿ ಅಧ್ಯಕ್ಷ ಡಾ.ಎಸ್.ಶಿವರಾಜಪ್ಪ ಪಾಲ್ಗೊಂಡಿದ್ದರು.