Bengaluru : ಬೆಂಗಳೂರಿನ ಜಕ್ಕೂರಿನಲ್ಲಿ ಭಾನುವಾರ ನಡೆದ ನೇತಾಜಿ ಸುಭಾಷ್‌ಚಂದ್ರ ಬೋಸ್ (Netaji Subhash Chandra Bose) ಅವರ 125ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ನವೀಕೃತ ಸರ್ಕಾರಿ ವೈಮಾನಿಕ ಶಾಲೆಯನ್ನು (Government Aviation School) ಉದ್ಘಾಟಿಸಿ ಮತ್ತು 75 NCC ಘಟಕಗಳನ್ನು ಘೋಷಿಸಿ, 75 ಪೈಲಟ್‌ಗಳ ತರಬೇತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ “ಸುಭಾಷ್‌ಚಂದ್ರ ಬೋಸ್ ಅವರ ಕನಸುಗಳನ್ನು ಸಾಕಾರಗೊಳಿಸುವ ದಿಸೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಎನ್‌ಸಿಸಿ ಸೇರುವ ಆಸಕ್ತಿಯನ್ನು ಬೆಳೆಸಲು ರಾಜ್ಯದ 75 ಶಾಲಾ, ಕಾಲೇಜುಗಳಲ್ಲಿ ಹೊಸದಾಗಿ ಎನ್‌ಸಿಸಿ ಘಟಕ ಪ್ರಾರಂಭಿಸಿ, 7,500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ಪ್ರತಿ ವಿದ್ಯಾರ್ಥಿಗೆ ತಲಾ ₹ 12,000 ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 44,000 ಎನ್‌ಸಿಸಿ ಕೆಡೆಟ್‌ಗಳಿದ್ದು, ಹೊಸ ಘಟಕಗಳ ಆರಂಭದ ಬಳಿಕ ಈ ಸಂಖ್ಯೆ 50,000 ದಾಟಲಿದೆ. ಮಹಿಳೆಯರಿಗೆ ಸ್ವಯಂರಕ್ಷಣೆ ತರಬೇತಿ ನೀಡಲು ಪೊಲೀಸ್ ಇಲಾಖೆಯ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವೈಮಾನಿಕ ತರಬೇತಿ ಸಂಸ್ಥೆಯಲ್ಲಿ ಪೂರ್ಣ ಪ್ರಮಾಣದ ರನ್‌ವೇ ನಿರ್ಮಾಣದ ಬೇಡಿಕೆ ಇದ್ದು ಮುಂದಿನ ದಿನಗಳಲ್ಲಿ ಪರಿಶೀಲಿಸಿ, ಅಗತ್ಯ ಸ್ಥಳಾವಕಾಶ ಕಲ್ಪಿಸಲಾಗುವುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ಯುವ ಸಬಲೀಕರಣ ಖಾತೆ ಸಚಿವ ಕೆ.ಸಿ. ನಾರಾಯಣಗೌಡ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ರಾಜ್ಯದ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿ.ಸಿ. ನಾಗೇಶ್, ಶಾಸಕ ಕೃಷ್ಣ ಬೈರೇಗೌಡ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಉಪಸ್ಥಿತರಿದ್ದರು.