Bhopal: ಮಧ್ಯಪ್ರದೇಶ ಸರ್ಕಾರ ಹೊಸ internship ಯೋಜನೆ (New Internship Scheme) ಘೋಷಿಸಿದೆ. ಈ ಯೋಜನೆಯಡಿ ನೋಂದಾಯಿತ ಕೈಗಾರಿಕೆಗಳಲ್ಲಿ ಇಂಟರ್ನ್ ಆಗಿ ಸೇರುವ ಯುವಕರಿಗೆ ತಿಂಗಳಿಗೆ ₹5,000 ಹಾಗೂ ಯುವತಿಯರಿಗೆ ₹6,000 ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಪ್ರಕಟಿಸಿದ್ದಾರೆ.
ಅವರು ಭೋಪಾಲ್ ಬಳಿಯ ಆಚಾರ್ಪುರ ಕೈಗಾರಿಕಾ ಪ್ರದೇಶದಲ್ಲಿ ₹416 ಕೋಟಿ ಮೌಲ್ಯದ ಆರು ಕೈಗಾರಿಕಾ ಘಟಕಗಳ ಶಂಕುಸ್ಥಾಪನೆ ಸಂದರ್ಭದಲ್ಲಿ ಮಾತನಾಡಿದರು. “ಪ್ರತಿಯೊಬ್ಬ ಯುವಕನಿಗೂ ಉದ್ಯೋಗ ಸಿಗಬೇಕು ಎಂಬುದು ಸರ್ಕಾರದ ಉದ್ದೇಶ. ಯುವಕರ ಶಕ್ತಿಯನ್ನು ಬಳಕೆಮಾಡಿಕೊಳ್ಳಲು ಈ ಇಂಟರ್ನ್ಶಿಪ್ ಯೋಜನೆಯ ಮೂಲಕ ಮಾರ್ಗ ತೆರೆದಿದ್ದೇವೆ” ಎಂದು ಹೇಳಿದರು.
‘ಲಾಡ್ಲಿ ಬೆಹ್ನಾ‘ ಯೋಜನೆಯ ವಿಸ್ತರಣೆ: ಲಾಡ್ಲಿ ಬೆಹ್ನಾ ಯೋಜನೆಯ ಲಾಭಧಾರಕರಿಗೆ ದೀಪಾವಳಿಯಿಂದ ಪ್ರತಿ ತಿಂಗಳು ₹1,500 ನೇರ ನಗದು ಸಹಾಯ ನೀಡಲಾಗುತ್ತದೆ. ಈ ಮೊತ್ತ 2028ರ ವೇಳೆಗೆ ₹3,000ಕ್ಕೆ ಹೆಚ್ಚಳವಾಗಲಿದೆ. ಸಾವನ್ ಹಬ್ಬದ ಸಮಯದಲ್ಲಿ ಸಹೋದರಿಯರಿಗೆ ಹೆಚ್ಚುವರಿ ಮೊತ್ತವನ್ನು ನೀಡಲು ಯೋಜಿಸಲಾಗಿದೆ.
ಮುಖ್ಯಮಂತ್ರಿ ಕೈಗಾರಿಕೆಗಳನ್ನು “ಶ್ರಮದ ದೇವಾಲಯ” ಎಂದು ಕರೆಯುತ್ತಾ, “ಈ ಪ್ರದೇಶದಲ್ಲಿ ಉದ್ಯಮಶೀಲತೆಯ ಬೆಳವಣಿಗೆ ಹಾಗೂ ಉದ್ಯೋಗಾವಕಾಶಗಳಿಗೆ ಬೃಹತ್ ಬಾಗಿಲು ತೆರೆದಿದೆ. ಈಗ ಮಧ್ಯಪ್ರದೇಶದ ಯುವಕರು ವಲಸೆ ಹೋಗಬೇಕಾದ ಅಗತ್ಯವೇ ಇಲ್ಲ” ಎಂದು ಹೇಳಿದರು.
ಆಚಾರ್ಪುರದಲ್ಲಿ ತಯಾರಾಗುವ ಜಾಕೆಟ್ಗಳು ಅಮೆರಿಕ ಹಾಗೂ ಇತರ ದೇಶಗಳಿಗೆ ರಫ್ತು ಆಗುತ್ತಿವೆ. ಮಧ್ಯಪ್ರದೇಶದ ಹತ್ತಿ ವಿಶ್ವವಿಖ್ಯಾತವಾಗಿದ್ದು, ಇದರ ಮಾರ್ಕೆಟಿಂಗ್‌ಗೆ ಯುಕೆ, ದುಬೈ, ಜರ್ಮನಿ, ಜಪಾನ್, ಸ್ಪೇನ್ ಸೇರಿ ಹಲವೆಡೆ ರೋಡ್ ಶೋಗಳನ್ನು ನಡೆಸಲಾಗಿದೆ.
2019ರಲ್ಲಿ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ₹4,000 ಪ್ರೋತ್ಸಾಹಧನದೊಂದಿಗೆ “ಯುವ ಸ್ವಾಭಿಮಾನ್ ಯೋಜನೆ” ಆರಂಭಿಸಿದ್ದರು. ಆದರೆ ಸರ್ಕಾರ ಬದಲಾಗುತ್ತಿದ್ದಂತೆ ಯೋಜನೆ ಸ್ಥಗಿತಗೊಂಡಿತು.
ಆಚಾರ್ಪುರ ಕೈಗಾರಿಕಾ ವಿಸ್ತರಣೆ ಹಂತ-3 ಯೋಜನೆಯಡಿ 31.21 ಹೆಕ್ಟೇರ್ ಪ್ರದೇಶದಲ್ಲಿ ಕೈಗಾರಿಕಾ ಕೇಂದ್ರ ಅಭಿವೃದ್ಧಿಪಡಿಸಲಾಗುತ್ತಿದೆ.