Jabalpur: ಜಬಲ್ಪುರದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಪಾಕ್ ಪರ ಘೋಷಣೆಗಳನ್ನು (pro Pakistan slogan) ಕೂಗಿದ ಆರೋಪಿಗೆ ಮಧ್ಯಪ್ರದೇಶ ಹೈಕೋರ್ಟ್ (Madhya Pradesh High Court) ವಿಭಿನ್ನವಾದ ಶಿಕ್ಷೆ (Punishment) ವಿಧಿಸಿದೆ.
ಫೈಝಲ್ ನಿಸಾರ್ ಅಲಿಯಾಸ್ ಫೈಜಾನ್ ಎಂಬ ವ್ಯಕ್ತಿ ಮಧ್ಯಪ್ರದೇಶ ಹೈಕೋರ್ಟ್ನ ಆದೇಶಕ್ಕೆ ಅನುಗುಣವಾಗಿ ಜಬಲ್ಪುರ ಪೊಲೀಸ್ ಠಾಣೆಯ ಹೊರಗೆ ರಾಷ್ಟ್ರೀಯ ಧ್ವಜದ ಮುಂದೆ 21 ಬಾರಿ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಾರೆ.
ಆರೋಪಿ ಫೈಝಲ್ ಅಲಿಯಾಸ್ ಫೈಜಾನ್ 50 ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡ್ ಅನ್ನು ಟ್ರಯಲ್ ಕೋರ್ಟ್ಗೆ ಸೂಕ್ತ ಶ್ಯೂರಿಟಿ ಒದಗಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಇಷ್ಟೇ ಅಲ್ಲದೇ, ಫೈಸಲ್ ಭೋಪಾಲ್ ಪೊಲೀಸ್ ಠಾಣೆಗೆ ತಿಂಗಳಿಗೆ ಎರಡು ಬಾರಿ ಹಾಜರಾಗಿ ಅಲ್ಲಿನ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಬೇಕು ಹಾಗೂ 21 ಬಾರಿ ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗುವಂತೆ ಸೂಚಿಸಿದೆ.
ಆರೋಪಿ ಇದನ್ನು ಮುಂದಿನ ವಿಚಾರಣೆಯವರೆಗೂ ಕಡ್ಡಾಯವಾಗಿ ಪಾಲಿಸಬೇಕು. ಆರೋಪಿ ಈ ಷರತ್ತುಗಳನ್ನು ಪೂರೈಸಿದ್ದಾರೋ ಇಲ್ಲವೋ ಎಂಬುದನ್ನು ಭೋಪಾಲ್ ಪೊಲೀಸ್ ಆಯುಕ್ತರು ಮೇಲುಸ್ತುವಾಗಿ ವಹಿಸಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಆದರೆ, ಪ್ರತಿವಾದಿಯ ವಕೀಲರು ಅರ್ಜಿದಾರರನ ಮೇಲೆ ತಪ್ಪಾಗಿ ಆರೋಪ ಹೊರಿಸಲಾಗಿದೆ ಎಂದು ವಾದಿಸಿದರು. ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ಆರೋಪಿ ಕೂಗಿದ ಘೋಷಣೆಗಳಿಗೆ ಪೂರಕವಾಗಿ ವಿಡಿಯೋ ದಾಖಲೆಯನ್ನು ಒದಗಿಸಿದರು.
ಪ್ರಮಾಣೀಕೃತ ವಿಡಿಯೋದಲ್ಲಿ ಆರೋಪಿಯ ಧ್ವನಿಯೂ ಸ್ಪಷ್ಟವಾಗಿ ಕೇಳಿಸಿದ್ದನ್ನು ನ್ಯಾಯಮೂರ್ತಿಗಳು ಗಮನಿಸಿದರು. ಜೊತೆಗೆ ಆರೋಪಿ ವಿರುದ್ಧ 14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದೂ ಪೀಠಕ್ಕೆ ತಿಳಿಸಲಾಯಿತು. ವಾದ-ಪ್ರತಿವಾದ ಆಲಿಸಿ ಕೋರ್ಟ್ ಆರೋಪಿಗೆ ಷರತ್ತುಬದ್ಧ ಜಾಮೀನು ದಯ ಪಾಲಿಸಿತು.