
IPL 2025ರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore-RCB) ತಂಡ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು.
RCBಯ ಪರ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ನೀಡಿದರು. ಫಿಲ್ ಸಾಲ್ಟ್ 17 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಹೊಡೆದು 37 ರನ್ ಗಳಿಸಿದರು. ಪವರ್‌ಪ್ಲೇನಲ್ಲಿ 3.3 ಓವರ್ ನಲ್ಲೇ 61 ರನ್ ಬಾರಿಸಿದರು.
3.5ನೇ ಓವರ್ ನಲ್ಲಿ ಫಿಲ್ ಸಾಲ್ಟ್ ರನ್ ಕದಿಯಲು ಹೋಗಿ ರನ್‌ಔಟ್ ಆಗಿ ಹೊರಟರು. ಕೊಹ್ಲಿ ನಂತರ ರನ್ ನೀಡದೆ ಹಿಂದೇ ಹೋದರೂ, ಸಾಲ್ಟ್ ಆಗಾಗಲೇ ಕ್ರೀಸ್ ಬಿಟ್ಟು ಬಿದ್ದಿದ್ದರು. ಇದರ ನಂತರ ಆರ್‌ಸಿಬಿಯ ಇನಿಂಗ್ಸ್ ಕುಸಿತವಾಯಿತು.
ಸಾಲ್ಟ್ ಬಳಿಕ ಪಡಿಕ್ಕಲ್ (1), ಲಿವೀಂಗ್ಸ್ಟೋನ್ (4), ಜಿತೇಶ್ ಶರ್ಮಾ (3), ರಜತ್ ಪಾಟೀದಾರ್ (25), ಕೃನಾಲ್ ಪಾಂಡ್ಯ (3) ಕ್ರಮವಾಗಿ ಔಟಾಗಿ ತಂಡ ಕಡಿಮೆ ಮೊತ್ತದಲ್ಲಿ ತೃಪ್ತಿ ಪಟ್ಟುಕೊಂಡಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಕನ್ನಡಿಗ ಕೆಎಲ್ ರಾಹುಲ್ 93 ರನ್ ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಈ ಮೂಲಕ ಡೆಲ್ಲಿ ಈ ಋತುವಿನಲ್ಲಿ ಅಜೇಯವಾಗಿಯೇ ನಾಲ್ಕನೇ ಗೆಲುವು ಸಾಧಿಸಿದೆ.
ಸೋಲಿಗೆ ಕಾರಣವಾದ ಎರಡು ಪ್ರಮುಖ ತಪ್ಪುಗಳು
ಫಿಲ್ ಸಾಲ್ಟ್ ರನ್ಔಟ್: ಅವಶ್ಯಕವಿಲ್ಲದ ರನ್ ಕದಿಯುವ ಯತ್ನ ತಂಡದ ತೀವ್ರ ರನ್‌ರೇಟ್‍ಗೆ ಬ್ರೇಕ್ ಹಾಕಿತು.
ರಾಹುಲ್ ಕ್ಯಾಚ್ ಡ್ರಾಪ್: ಬೌಲಿಂಗ್‌ನಲ್ಲಿ ಒಳ್ಳೆಯ ಆರಂಭ ಕೊಟ್ಟ ಆರ್‌ಸಿಬಿ, ಕೆಎಲ್ ರಾಹುಲ್ 5 ರನ್ ಗಳಿದ್ದಾಗ ಕ್ಯಾಚ್ ಕೈಚೆಲ್ಲಿತು. ರಜತ್ ಪಾಟೀದಾರ್ ಈ ಅವಕಾಶವನ್ನು ತಪ್ಪಿಸಿದ ಕಾರಣ, ರಾಹುಲ್ ಅವರ ಬೃಹತ್ ಇನ್ನಿಂಗ್ಸ್ ತಂಡದ ಸೋಲಿಗೆ ಕಾರಣವಾಯಿತು.
ಇನ್ನು ಈ ಹಿನ್ನಲೆಯಲ್ಲಿ RCB ತವರು ಮೈದಾನದಲ್ಲಿ ಸತತ ಎರಡನೇ ಸೋಲನ್ನು ಅನುಭವಿಸಿದೆ.