Patna: ಬಿಹಾರದಲ್ಲಿ ಮತದಾರರ ಪಟ್ಟಿಯ ಕುರಿತು ಗಂಭೀರ ಆರೋಪಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಾಡಿದ್ದಾರೆ. ಗಯಾ ಜಿಲ್ಲೆಯ ನಿಡಾನಿ ಗ್ರಾಮದ ಇಡೀ ಜನರನ್ನು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆಂದು ಚುನಾವಣಾ ಆಯೋಗದ ಕರಡು ಪಟ್ಟಿಯಲ್ಲಿ ತೋರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯಾದ್ಯಂತ ನಡೆಯುತ್ತಿರುವ “ಮತದಾರರ ಅಧಿಕಾರ ಯಾತ್ರೆ” ವೇಳೆ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಟೀಕಿಸಿದ್ದಾರೆ. “ಚುನಾವಣಾ ಆಯೋಗದ ಮಾಯಾಜಾಲ ನೋಡಿ… ಸಂಪೂರ್ಣ ಗ್ರಾಮವೇ ಒಂದೇ ಮನೆಯಲ್ಲಿ ವಾಸಿಸುತ್ತಿದೆ” ಎಂದು ಅವರು ಬರೆದಿದ್ದಾರೆ.
ಬರಾಚಟ್ಟಿ ಕ್ಷೇತ್ರದ ನಿಡಾನಿ ಗ್ರಾಮದ ಒಂದು ಬೂತ್‌ನಲ್ಲಿ ಎಲ್ಲಾ 947 ಮತದಾರರನ್ನು ಮನೆ ಸಂಖ್ಯೆ 6ರಲ್ಲಿ ಸೇರಿಸಲಾಗಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಇದು ಕೇವಲ ಒಂದು ಗ್ರಾಮದ ಉದಾಹರಣೆ, ಇಡೀ ರಾಜ್ಯ ಮತ್ತು ದೇಶದಲ್ಲಿ ಇದೇ ರೀತಿಯ ಅಕ್ರಮ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಆರೋಪಕ್ಕೆ ಪ್ರತಿಯಾಗಿ ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಹಾಗೂ ಗಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಪಷ್ಟನೆ ನೀಡಿದ್ದಾರೆ. ಮನೆಗಳಿಗೆ ಸರಣಿ ಸಂಖ್ಯೆಗಳಿಲ್ಲದ ಹಳ್ಳಿಗಳಲ್ಲಿ ಅಥವಾ ಕೊಳೆಗೇರಿಗಳಲ್ಲಿ ಒಂದು ಮನೆ ಸಂಖ್ಯೆಯನ್ನು ಎಲ್ಲರಿಗೂ ನೀಡಲಾಗುತ್ತದೆ. ಮತದಾರರ ಸೇರ್ಪಡೆ ಪ್ರಕ್ರಿಯೆ ಸುಲಭವಾಗಲು ಇದು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಗ್ರಾಮದ ನಿವಾಸಿಗಳ ವಿಡಿಯೋ ತುಣುಕನ್ನು ಜಿಲ್ಲಾಧಿಕಾರಿಗಳು ಹಂಚಿಕೊಂಡಿದ್ದು, ಜನರು ಮತದಾರರ ಪಟ್ಟಿಯ ಪರಿಷ್ಕರಣೆಯಿಂದ ತೃಪ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಪ್ರದೇಶಕ್ಕೆ ತಪ್ಪು ಭಾವನೆ ಮೂಡಿಸುವ ಪ್ರಯತ್ನದಿಂದ ಅಸಮಾಧಾನಗೊಂಡಿದ್ದಾರೆ ಎಂದೂ ಹೇಳಿದ್ದಾರೆ.
ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮೂಲಕ ಮತಗಳ್ಳತನ ನಡೆಯುತ್ತಿದೆ ಎಂದು ಅವರು ಸಂಸತ್ತಲ್ಲಿಯೂ ವಿಷಯ ಎತ್ತಿದ್ದರು.
ಈ ವಿಷಯದ ವಿರೋಧವಾಗಿ ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಒಕ್ಕೂಟ ಬಿಹಾರದಲ್ಲಿ “ಮತ ಅಧಿಕಾರ ಯಾತ್ರೆ” ನಡೆಸುತ್ತಿದೆ. ಈ ಯಾತ್ರೆ ಸೆಪ್ಟೆಂಬರ್ 1ರಂದು ಅಂತ್ಯಗೊಳ್ಳಲಿದೆ.







