ಕೇರಳ ಹೈಕೋರ್ಟ ನ ನಿವೃತ್ತ ನ್ಯಾಯಮೂರ್ತಿ (High Court Judge) ನ್ಯಾ. ಶಶಿಧರನ್ ನಂಬಿಯಾರ್ (73) ಅವರು ಸೈಬರ್ ವಂಚನೆಯ ಶಿಕಾರಿ ಯಾಗಿದ್ದಾರೆ. ತ್ರಿಪುಣಿತುರಾದ ಎರೂರ್ ಅಮೃತ ಲೇನ್ ನಲ್ಲಿ ವಾಸಿಸುತ್ತಿರುವ ನಂಬಿಯಾರ್ ಅವರಿಗೆ online ಷೇರು ಮಾರುಕಟ್ಟೆ ಮೂಲಕ ಶೇ.850 ಲಾಭ ನೀಡುವ ಭರವಸೆ ನೀಡಿ ವಂಚಕರು 90 ಲಕ್ಷ ರೂ. ದೋಚಿದ್ದಾರೆ.
ನ್ಯಾಯಮೂರ್ತಿಯನ್ನು “ಆದಿತ್ಯ ಬಿರ್ಲಾ ಇಕ್ವಿಟಿ ಲರ್ನಿಂಗ್” ಎಂಬ ಹೆಸರಿನ ವಾಟ್ಸಾಪ್ ಗುಂಪಿಗೆ ಸೇರಿಸಿ, ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವಾಗುತ್ತದೆ ಎಂದು ಭರವಸೆ ನೀಡಲಾಯಿತು. ಮನವರಿಕೆಯಾದ ನಂಬಿಯಾರ್, ಗುಂಪಿನಲ್ಲಿ ಹಂಚಿದ ಲಿಂಕ್ ಮೂಲಕ ಹಣವನ್ನು ವರ್ಗಾಯಿಸಿದರು.
ಡಿಸೆಂಬರ್ 4 ರಿಂದ ಡಿಸೆಂಬರ್ 30, 2024 ರವರೆಗೆ, ವಂಚಕರು ನ್ಯಾಯಮೂರ್ತಿಯ ವಿವಿಧ ಬ್ಯಾಂಕ್ ಖಾತೆಗಳಿಂದ 90 ಲಕ್ಷ ರೂ.ವನ್ನು ಡ್ರಾ ಮಾಡಿದರು. ಲಾಭವೂ ಸಿಗದೇ, ಹೂಡಿಕೆ ಮಾಡಿದ ಹಣವೂ ಮರಳದೇ, ಅವರು ಜನವರಿ 5 ರಂದು ತ್ರಿಪುಣಿತುರಾ ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ಹೀಗೆ ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ ಪಡೆಯಲು ಸಾಧ್ಯವಾಗಿಲ್ಲ. ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ತೊಡಗಿದ್ದು, ಈ ಪ್ರಕರಣವನ್ನು ಸೈಬರ್ ಪೊಲೀಸ್ ವಿಭಾಗಕ್ಕೆ ಹಸ್ತಾಂತರಿಸಲಿದ್ದಾರೆ.
ನ್ಯಾ. ಶಶಿಧರನ್ ನಂಬಿಯಾರ್ ಅವರು 1975 ರಲ್ಲಿ ವಕೀಲರಾಗಿದ್ದು, ಕೇರಳ ರಾಜ್ಯ ನ್ಯಾಯಾಂಗ ಸೇವೆಗೆ ಸೇರಿ, 2002 ರಲ್ಲಿ ಕೇರಳ ಹೈಕೋರ್ಟ್ ರಿಜಿಸ್ಟ್ರಾರ್ ಹುದ್ದೆಗೆ ನೇಮಕಗೊಂಡರು. 2001-2002ರಲ್ಲಿ ತಿರುವನಂತಪುರ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.