
Moscow (Russia): ಉಕ್ರೇನ್ (Ukraine) ನಡುವಿನ 30 ದಿನಗಳ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿ ಮತ್ತಷ್ಟು ಚರ್ಚೆಯ ಅಗತ್ಯವಿದೆ ಎಂದಿದ್ದಾರೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧವನ್ನು ಕೊನೆಗೊಳಿಸಲು ಮಾಡಿದ ಶ್ರಮಕ್ಕೆ ಪುಟಿನ್ ಧನ್ಯವಾದ ಹೇಳಿದ್ದಾರೆ. ಗುರುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಜಾಗತಿಕ ಸವಾಲಿನ ನಡುವೆಯೂ ಶಾಂತಿಯ ಪ್ರಯತ್ನ ಮಾಡಿದ ನಾಯಕರ ಕಾರ್ಯ ಶ್ಲಾಘನೀಯ ಎಂದಿದ್ದಾರೆ.
“ಉಕ್ರೇನ್ ಪರಿಸ್ಥಿತಿಯ ಕುರಿತು ಗಮನಹರಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಪ್ರಧಾನಿ ಮೋದಿ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ನಾಯಕರೂ ಈ ಕಾರ್ಯದಲ್ಲಿ ತಮ್ಮ ಸಮಯ ಮೀಸಲಾಗಿಸಿದ್ದಾರೆ. ಯುದ್ಧ ನಿಲ್ಲಿಸಲು ಅವರ ಸಹಕಾರ ಶ್ಲಾಘನೀಯ,” ಎಂದು ಪುಟಿನ್ ಹೇಳಿದ್ದಾರೆ.
ಅಮೆರಿಕ 30 ದಿನಗಳ ಕದನ ವಿರಾಮ ಪ್ರಸ್ತಾಪಿಸಿದರೂ, ಇದರ ಜಾರಿಗೆ ಸಂಬಂಧಿಸಿದಂತೆ ಕೆಲವು ಗಂಭೀರ ಪ್ರಶ್ನೆಗಳಿದ್ದು, ಇನ್ನಷ್ಟು ಚರ್ಚೆಯ ಅಗತ್ಯವಿದೆ ಎಂದು ಪುಟಿನ್ ತಿಳಿಸಿದ್ದಾರೆ. ಈ ಪ್ರತಿಕ್ರಿಯೆಯ ಬೆನ್ನಲ್ಲೇ ಟ್ರಂಪ್, ಇದೊಂದು ಭರವಸೆಯ ಬೆಳಕು ಎಂದು ಹೇಳಿದ್ದಾರೆ.
2022ರ ಫೆಬ್ರವರಿಯಿಂದ ಉಕ್ರೇನ್-ರಷ್ಯಾ ಯುದ್ಧವು ಅಪಾರ ಹಾನಿ ಉಂಟುಮಾಡಿದ್ದು, ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಭೌಗೋಳಿಕ ರಾಜಕೀಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.