
Bengaluru: “ಕೆಲ ಸಚಿವರು ಪರಸ್ಪರ ಲಾಭದ ಹೊಂದಾಣಿಕೆ ಮಾಡಿಕೊಂಡು, ನಾನು ನಿನಗೆ – ನೀನು ನನಗೆ ಎಂಬಂತೆ ವರ್ತಿಸುತ್ತಿದ್ದಾರೆ,” ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ (MLA Narayanaswamy) ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, “ಕೆಲ ಸಚಿವರು ಐಎಎಸ್ ಅಧಿಕಾರಿಗಳ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಸಚಿವರ ಕೆಲಸದ ಶೈಲಿಯಿಂದ ನಾನು ಅಸಮಾಧಾನದಲ್ಲಿದ್ದೇನೆ,” ಎಂದು ಹೇಳಿದ್ದಾರೆ.
“ಬೈರತಿ ಸುರೇಶ್ ಒಳ್ಳೆಯ ವ್ಯಕ್ತಿ. ಆದರೆ ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದೊಯ್ಯುವ ಕೆಲಸ ಬೇಕು. ಅವರು ಕೆಲ ಬಲಾಢ್ಯ ಸಮುದಾಯಗಳ ಪ್ರಭಾವದಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದಾರೆ,” ಎಂದು ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
“ನಾನು ಅಹಿಂದ ಸಮುದಾಯದಿಂದ ಬಂದವನು. ನನ್ನ ಸಮುದಾಯದ ಪರವಾಗಿ ಉತ್ತಮ ಕೆಲಸ ಮಾಡಬೇಕು ಎಂಬ ಉದ್ದೇಶ ನನ್ನದು. ಆದರೆ ಕೆಲವು ಶಕ್ತಿಗಳ ಒತ್ತಡದಿಂದ ಸಚಿವರು ಮುಕ್ತವಾಗಿ ಕೆಲಸ ಮಾಡಲು ಅಸಾಧ್ಯವಾಗಿದೆ,” ಎಂದರು.
“ಕೋಲಾರ ಹಾಲು ಒಕ್ಕೂಟ ಚುನಾವಣೆ ವಿಷಯ ಸುರ್ಜೇವಾಲಾ ಅವರ ಗಮನಕ್ಕೆ ತಂದಿದ್ದೇನೆ. ಈ ಚುನಾವಣೆ ಪಕ್ಷಕ್ಕೆ ಸಂಬಂಧಪಟ್ಟದ್ದೇ ಅಲ್ಲ. ನನ್ನ ಸಮುದಾಯದ ಕಾರ್ಯಕರ್ತರಿಗೆ ಬೆಂಬಲ ನೀಡಿದೆ. ಇದರ ಬಗ್ಗೆ ಮಾಲೂರು ಶಾಸಕ ನಂಜೇಗೌಡರು ಪ್ರಶ್ನೆ ಮಾಡಿದ್ದಾರೆ. ನನ್ನ ವಿರುದ್ಧ ದೂರು ಕೊಡಬೇಕೆಂದಿದ್ದಾರೆ. ಅವರು ಏನು ಹುಲಿ ಅಥವಾ ಸಿಂಹವೇ?” ಎಂದು ಟೀಕಿಸಿದರು.
“ನಂಜೇಗೌಡರ ಬಳಿ ಕ್ರಷರ್ ಇದ್ದರೆ ಎನು? ನಾನು ಯಾವುದೇ ಹಗರಣ ಮಾಡಿಕೊಂಡಿಲ್ಲ. ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಬಂದವರು. ನಾನು ಮೂಲ ಕಾಂಗ್ರೆಸ್ಸಿಗ,” ಎಂದು ನಾರಾಯಣಸ್ವಾಮಿ ಹೇಳಿದರು.