New Delhi: 8 ರಿಂದ 10ನೇ ತರಗತಿಗಳ ಅರ್ಧವಾರ್ಷಿಕ ಪರೀಕ್ಷೆಗಳ ಫಲಿತಾಂಶಗಳನ್ನು (Midterm Exam Result) ಪ್ರಕಟಿಸದಂತೆ ಸೋಮವಾರ ಸುಪ್ರೀಂ ಕೋರ್ಟ್ (Supreme Court) ಕರ್ನಾಟಕ ಸರ್ಕಾರಕ್ಕೆ (Karnataka government) ನಿರ್ಬಂಧ ಹೇರಿದೆ.
ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದ್ದು ಮುಂದಿನ ಆದೇಶದವರೆಗೆ 8, 9 ಮತ್ತು 10ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸದಂತೆ ನಿರ್ಬಂಧ ಹೇರಿದೆ.
ಮಾರ್ಚ್ 22 ರಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು.
“ವಿದ್ಯಾರ್ಥಿಗಳಿಗೆ ಯಾಕೆ ಕಿರುಕುಳ ನೀಡುತ್ತಿದ್ದೀರಿ?, ನೀವು ಈ ರೀತಿ ವರ್ತಿಸಬಾರದು, ಇದನ್ನು ಅಹಂಕಾರದ ಸಮಸ್ಯೆ ಮಾಡಿಕೊಳ್ಳಬೇಡಿ, ನಿಮಗೆ ನಿಜವಾಗಿಯೂ ವಿದ್ಯಾರ್ಥಿಗಳ ಹಿತದ ಬಗ್ಗೆ ಕಾಳಜಿ ಇದ್ದರೆ ದಯವಿಟ್ಟು ಒಳ್ಳೆಯ ಶಾಲೆಗಳನ್ನು ತೆರೆಯಿರಿ.
ಕರ್ನಾಟಕ ಸರ್ಕಾರ ಅನುಸರಿಸುತ್ತಿರುವ ಶಿಕ್ಷಣದ ಮಾದರಿಯನ್ನು ಬೇರೆ ಯಾವುದೇ ರಾಜ್ಯಗಳು ಅನುಸರಿಸುತ್ತಿಲ್ಲ ಎಂದು ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ತ್ ಕಾಮತ್ ಅವರಿಗೆ ಪೀಠ ಹೇಳಿದೆ.
ಸುಪ್ರೀಂ ಕೋರ್ಟ್ ನಾಲ್ಕು ವಾರಗಳಲ್ಲಿ ಪರೀಕ್ಷೆಯ ನಿಖರವಾದ ವಿವರಗಳನ್ನು ನೀಡುವ ಅಫಿಡವಿಟ್ ಸಲ್ಲಿಸಲು ರಾಜ್ಯ ಸರ್ಕಾರವನ್ನು ಕೇಳಿದೆ.
ಏಕ ನ್ಯಾಯಾಧೀಶರ ಪೀಠದ ಮಾರ್ಚ್ 6 ರ ಆದೇಶವನ್ನು ತಳ್ಳಿಹಾಕಿ 2023-24ನೇ ಶೈಕ್ಷಣಿಕ ವರ್ಷಕ್ಕೆ ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಹೈಕೋರ್ಟ್‌ನ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು.
ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ) ಮೂಲಕ ವಿವಿಧ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ಅಕ್ಟೋಬರ್ 2023 ರ ನಿರ್ಧಾರವನ್ನು ಹೈಕೋರ್ಟ್‌ನ ಏಕ ನ್ಯಾಯಾಧೀಶರು ರದ್ದುಗೊಳಿಸಿದ್ದಾರೆ.