Mumbai: ಸತತ ಮೂರು ದಿನಗಳಿಂದ ಷೇರುಪೇಟೆಯಲ್ಲಿ (Stock Market) ಆರ್ಭಟವೇ ಹೆಚ್ಚಿದೆ. ವಿದೇಶಿ ನಿಧಿಯ ಹೊರ ಹರಿವಿನ ದಿಕ್ಕು ಬದಲಾಗಿಲ್ಲ. ಆಟೋ, ಫಾರ್ಮಾ ಮತ್ತು ಕ್ಯಾಪಿಟಲ್ ಗೂಡ್ಸ್ ಷೇರುದಾರರು ಲಾಭವನ್ನು ಕಾಯ್ದಿರಿಸಿಕೊಳ್ಳುವತ್ತ ಒಲವು ತೋರಿದರು.
ಹೀಗಾಗಿ ಬುಧವಾರದ ವಹಿವಾಟು ಕೂಡ ರಭಸವನ್ನು ಪಡೆಯಲಿಲ್ಲ. ಆರಂಭದಲ್ಲಿ ಗಳಿಕೆಯೊಂದಿಗೆ ವಹಿವಾಟು ಆರಂಭಿಸಿದ ಮುಂಬಯಿ ಷೇರುಪೇಟೆ (Stock Market) ಸೂಚ್ಯಂಕ ‘Sensex’ 138.74 ಅಂಕ ಕುಸಿಯಿತು. ಶೇ. 0.17ರಷ್ಟು ನಷ್ಟ ಅನುಭವಿಸಿ 80,081.98ರಲ್ಲಿ ವಹಿವಾಟು ಮುಕ್ತಾಯಗೊಳಿಸಿತು. ಆರಂಭದಲ್ಲಿ ಏರಿಕೆಯ ಓಘ ಜೋರಿತ್ತು. ಆದರೆ ಇದು ಅಲ್ಪಕಾಲೀನವಾಯಿತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ‘Nifty 50’ಯು 36.60 ಅಂಕ ಅಥವಾ ಶೇ. 0.15ರಷ್ಟು ಕೆಳಕ್ಕೆ ಬಿದ್ದು, 24,435.50ರಲ್ಲಿ ಸ್ಥಿರಗೊಂಡಿತು. ಮಹೀಂದ್ರಾ ಆಂಡ್ ಮಹೀಂದ್ರಾ, ಸನ್ಫಾರ್ಮಾ, ಪವರ್ ಗ್ರಿಡ್ ಕಾರ್ಪೊರೇಷನ್, NTPC, ಅದಾನಿ ಪೋರ್ಟ್ಸ್,ಲಾರ್ಸನ್ ಆಂಡ್ ಟೂಬ್ರೊ, CICII ಬ್ಯಾಂಕ್ ಮತ್ತು ಟೈಟಾನ್ ಷೇರುಗಳು ನಷ್ಟಕ್ಕೀಡಾದವು.
ಸೆಪ್ಟೆಂಬರ್ 2024ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಬಜಾಜ್ ಫೈನಾನ್ಸ್ ಕಂಪನಿಯು ನಿವ್ವಳ ಲಾಭ ಶೇ. 13ರಷ್ಟು ಏರಿಕೆಯಾಗಿರುವುದು ವರದಿಯಾಗಿತ್ತು. ಇದರಿಂದ ಬಜಾಜ್ ಫೈನಾನ್ಸ್ ಷೇರುಗಳು ಬುಧವಾರದ ವಹಿವಾಟಿನಲ್ಲಿ ಶೇ. 4.90ಯಷ್ಟು ಏರಿಕೆ ಕಂಡವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign Institutional Investors-FII) ಮಂಗಳವಾರ 3,978.61 ಕೋಟಿ ರೂ. ಮೊತ್ತದ ಷೇರುಗಳನ್ನು ಮಾರಾಟ ಮಾಡಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) 5,869.06 ಕೋಟಿ ರೂ. ಮೊತ್ತದ ಈಕ್ವಿಟಿಗಳನ್ನು ಖರೀದಿಸಿದ್ದಾರೆ.
ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಶಾಂಘೈ ಮತ್ತು ಹಾಂಗ್ಕಾಂಗ್ ಸಕಾರಾತ್ಮಕ ಓಘ ಕಂಡರೆ, ಟೋಕಿಯೊ ನಕಾರಾತ್ಮಕ ಲಕ್ಷಣಗಳನ್ನು ತೋರಿಸಿತು.