Jammu: ಜಮ್ಮು ಮತ್ತು ಕಾಶ್ಮೀರದ (Jammu Kashmir) ಅಖ್ನೂರ್ ಸೆಕ್ಟರ್ನಲ್ಲಿ (Akhnoor sector) ನಿನ್ನೆ ಭದ್ರತಾ ಪಡೆಗಳ ಮೇಲೆ ದಾಳಿ ಎಸಗಿದ್ದ ಎಲ್ಲಾ ಮೂವರು ಉಗ್ರಗಾಮಿಗಳು ಹತರಾಗಿದ್ದಾರೆ.
ನಿನ್ನೆ ಸಂಜೆಯೇ ಒಬ್ಬ ಉಗ್ರನನ್ನು ಕೊಲ್ಲಲಾಗಿತ್ತು. ಇಂದು ಮಂಗಳವಾರ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೈನಿಕರು (Indian Army) ವಧಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಸೇನೆಯ ನಾಲ್ಕು ವರ್ಷದ ಶ್ವಾನ ‘ಫ್ಯಾಂಟಂ’ (dog Phantom) ಹುತಾತ್ಮವಾಗಿದೆ.
ಸೋಮವಾರ ಬೆಳಗ್ಗೆ ಗಡಿ ನಿಯಂತ್ರಣ ರೇಖೆ (LOC) ಬಳಿ ಸಾಗುತ್ತಿದ್ದ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ಆಂಬ್ಯುಲೆನ್ಸ್‌ಗೆ ಗುಂಡು ಹಾರಿಸಿದ ಮೂವರು ಭಯೋತ್ಪಾದಕರಲ್ಲಿ ಒಬ್ಬಾತ ವಿಶೇಷ ಪಡೆಗಳು ಮತ್ತು ಎನ್‌ಎಸ್‌ಜಿ ಕಮಾಂಡೋಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಂಜೆಯ ವೇಳೆಗೆ ಹತನಾಗಿದ್ದ. ಇಬ್ಬರು ತಲೆ ಮರೆಸಿಕೊಂಡಿದ್ದರು.
ಶೋಧ ಕಾರ್ಯಾಚರಣೆ ವೇಳೆ ತಲೆಮರೆಸಿಕೊಂಡಿದ್ದ ಇಬ್ಬರೂ ಭಯೋತ್ಪಾದಕರು ದೇವಸ್ಥಾನದಲ್ಲಿ ಅಡಗಿರುವುದು ಸೇನೆಗೆ ತಿಳಿದು ಬಂದಿತ್ತು.
ತಮ್ಮ ಸಹಚರನ ಸಾವಿನ ನಂತರ, ಇಬ್ಬರು ಭಯೋತ್ಪಾದಕರು ದೇವಾಲಯದ ಪಕ್ಕದ ನೆಲಮಾಳಿಗೆಯಲ್ಲಿ ಇಡೀ ರಾತ್ರಿ ಕಳೆದರು ಎಂದು ವರದಿಯಾಗಿದೆ.
ಮಂಗಳವಾರ ಬೆಳಗ್ಗೆ ಆ ನೆಲಮಾಳಿಗೆಗೆ ಭದ್ರತಾ ಪಡೆಗಳು ಪ್ರವೇಶಿಸಿದೆ. ಆಗ ನೆಲಮಾಳಿಗೆಯಲ್ಲಿ ಗ್ರೆನೇಡ್‌ಗಳನ್ನು ಎಸೆಯಲಾಗಿದೆ ಮತ್ತು ಗುಂಡಿನ ದಾಳಿ ನಡೆಸಲಾಗಿದೆ.
ಆಗ ನೆಲಮಾಳಿಗೆಯಿಂದ ಭಯಭೀತಗೊಂಡು ಹೊರಬಂದ ಭಯೋತ್ಪಾದಕರನ್ನು ಕೂಡಲೇ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದೆ.