
New Delhi: ಉತ್ತರ ಪ್ರದೇಶದ 33 ವರ್ಷದ ಮಹಿಳಾ ಕೇರ್ಟೇಕರ್ ಶಹಜಾದಿ ಖಾನ್ ಅವರನ್ನು ಫೆಬ್ರವರಿ 15ರಂದು UAEಯಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ದೆಹಲಿ High Courtಗೆ ತಿಳಿಸಿದೆ.
ಶಹಜಾದಿ ಖಾನ್ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಮನೆಯ ಶಿಶುವನ್ನು ಕೊಂದ ಆರೋಪದ ಮೇಲೆ ಆಕೆಗೆ ಮರಣದಂಡನೆ ವಿಧಿಸಲಾಯಿತು. ಆಕೆಯ ಅಂತ್ಯಕ್ರಿಯೆ ಮಾರ್ಚ್ 5ರಂದು ನಡೆಯಲಿದೆ.
2022ರ ಡಿಸೆಂಬರ್ 19ರಂದು ಪ್ರವಾಸಿ ವೀಸಾದೊಂದಿಗೆ ಅಬುಧಾಬಿಗೆ ತೆರಳಿದ ಶಹಜಾದಿ ಖಾನ್, ಅಲ್ಲಿನ ಕುಟುಂಬವೊಂದರಲ್ಲಿ ಮಗುವಿನ ಕೇರ್ ಟೇಕರ್ ಆಗಿ ನೇಮಿತರಾಗಿದ್ದರು. 2023ರ ಫೆಬ್ರವರಿಯಲ್ಲಿ ಆ ಕುಟುಂಬದ ದಂಪತಿಗಳು ತಮ್ಮ ಮಗುವಿನ ಸಾವಿಗೆ ಆಕೆಯೇ ಕಾರಣ ಎಂದು ಆರೋಪಿಸಿ, ಆಕೆಯನ್ನು ಬಂಧಿಸಿದರು.
ನ್ಯಾಯಾಲಯವು 2023ರ ಜುಲೈ 31ರಂದು ಆಕೆಗೆ ಮರಣದಂಡನೆ ವಿಧಿಸಿತು. 2024ರ ಫೆಬ್ರವರಿ 28ರಂದು ಈ ತೀರ್ಪು ಅಂತಿಮಗೊಂಡಿತು. ಗಲ್ಲಿಗೇರುವ ಮುನ್ನ ಆಕೆಯನ್ನು ಅಲ್ ವಾಥ್ಬಾ ಕೇಂದ್ರ ಜೈಲಿನಲ್ಲಿ ಇರಿಸಲಾಗಿತ್ತು. ಆಕೆ ಕ್ಷಮಾದಾನ ಅರ್ಜಿ ಸಲ್ಲಿಸಿದರೂ, ಅದನ್ನು ತಿರಸ್ಕರಿಸಲಾಯಿತು.
ಭಾರತೀಯ ರಾಯಭಾರ ಕಚೇರಿ, ಶಹಜಾದಿ ಖಾನ್ ಅವರ ಕುಟುಂಬಕ್ಕೆ ಆಕೆಯ ಅಂತ್ಯಕ್ರಿಯೆಗಾಗಿ ಅಬುಧಾಬಿಗೆ ಪ್ರಯಾಣದ ವ್ಯವಸ್ಥೆಯಲ್ಲಿ ಸಹಾಯ ಮಾಡುತ್ತಿದೆ.