New Delhi: ಇಂದು ನಡೆಯುತ್ತಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ (Vice Presidential Election) ಪ್ರಧಾನಿ ನರೇಂದ್ರ ಮೋದಿ ಮೊದಲಿಗೆ ಮತ ಚಲಾಯಿಸಿದರು. ಅವರ ಜೊತೆ ಕೇಂದ್ರ ಸಚಿವ ಕಿರಣ್ ರಿಜಿಜು, ಅರ್ಜುನ್ ರಾಮ್ ಮೇಘವಾಲ್, ಜಿತೇಂದ್ರ ಸಿಂಗ್ ಮತ್ತು ಎಲ್. ಮುರುಗನ್ ಕೂಡ ಸಂಸತ್ ಭವನದಲ್ಲಿ ಮತ ಚಲಾಯಿಸಿದರು. ಮತದಾನ ನಂತರ ಪ್ರಧಾನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ, 2025ರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕಿರುವುದಾಗಿ ತಿಳಿಸಿದ್ದಾರೆ. ನಂತರ ಅವರು ಪ್ರವಾಹ ಪೀಡಿತ ಹಿಮಾಚಲ ಪ್ರದೇಶ ಹಾಗೂ ಪಂಜಾಬ್‌ಗೆ ಭೇಟಿ ನೀಡಲಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಜೈರಾಮ್ ರಮೇಶ್, ನಾಸರ್ ಹುಸೇನ್, ಎಸ್ಪಿ ನಾಯಕ ರಾಮ್ ಗೋಪಾಲ್ ಯಾದವ್ ಸೇರಿದಂತೆ ಅನೇಕರು ಬೆಳಿಗ್ಗೆಯೇ ಮತ ಚಲಾಯಿಸಿದರು. 92 ವರ್ಷದ ದೇವೇಗೌಡ ಅವರು ವೀಲ್ಚೇರ್‌ನಲ್ಲಿ ಬಂದು ಮತ ಹಾಕಿದರು. ಕೇಂದ್ರ ಸಚಿವ ನಿತೀನ್ ಗಡ್ಕರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡೆದು ಬಂದು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಉಪರಾಷ್ಟ್ರಪತಿ ಸ್ಥಾನ ಧನಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದು, ಈ ಬಾರಿ NDA ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಮತ್ತು ಇಂಡಿಯಾ ಕೂಟದ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ.
ಸಂಸತ್ತಿನ ಎರಡೂ ಸದನದ ಸದಸ್ಯರಿಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಮತದಾನದ ಅವಕಾಶವಿದ್ದು, ಸಂಜೆ 6 ಗಂಟೆಗೆ ಮತ ಎಣಿಕೆ ಆರಂಭವಾಗಿ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 788 ಸದಸ್ಯರು ಮತದಾನಕ್ಕೆ ಅರ್ಹರಾಗಿದ್ದು, ಪ್ರಸ್ತುತ ಒಂದು ಲೋಕಸಭೆ ಹಾಗೂ ಆರು ರಾಜ್ಯಸಭಾ ಸ್ಥಾನಗಳು ಖಾಲಿ ಇರುವುದರಿಂದ 781 ಮಂದಿ ಸದಸ್ಯರೇ ಮತದಾನಕ್ಕೆ ಲಭ್ಯ. ಗೆಲುವಿಗೆ 391 ಮತಗಳ ಬಹುಮತ ಅಗತ್ಯ. ಎನ್ಡಿಎ ಬಳಿ 425 ಮತಗಳ ಶಕ್ತಿ ಇದ್ದರೆ, ವಿರೋಧ ಪಕ್ಷಗಳ ಬಳಿಯಲ್ಲಿ 324 ಮತಗಳ ಬೆಂಬಲವಿದೆ.
ಇಂಡಿಯಾ ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ಮಾತನಾಡಿ, ಇದು ಸಂವಿಧಾನಕ್ಕಾಗಿ ಹೋರಾಟ ಎಂದು ಹೇಳಿದ್ದಾರೆ. ನಾಗರಿಕ ಸಮಾಜದಿಂದ ದೊರಕಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಜನರಿಗೆ ಧನ್ಯವಾದ ತಿಳಿಸಿದ್ದಾರೆ.
ಸಂಜೆ ವೇಳೆಗೆ ಉಪರಾಷ್ಟ್ರಪತಿ ಚುನಾವಣೆಯ ಅಂತಿಮ ಫಲಿತಾಂಶ ಸ್ಪಷ್ಟವಾಗಲಿದೆ.