ಕೇರಳದಲ್ಲಿ (Kerala) ಅಪರೂಪದ ಆದರೆ ಮಾರಕವಾದ ಮೆದುಳು ತಿನ್ನುವ ಅಮೀಬಾ ಸೋಂಕು (ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್) ವೇಗವಾಗಿ ಹರಡುತ್ತಿದೆ. ತಿರುವನಂತಪುರಂನಲ್ಲಿ 17 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದ್ದು, ಈ ವರ್ಷ ಮಾತ್ರ 67 ಮಂದಿಗೆ ಸೋಂಕು ತಗುಲಿದ್ದು, 17 ಜನರು ಸಾವನ್ನಪ್ಪಿದ್ದಾರೆ.
ಆರೋಗ್ಯ ಇಲಾಖೆಯ ಪ್ರಕಾರ ಸೆಪ್ಟೆಂಬರ್ 12ರವರೆಗೆ 19 ಹೊಸ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಸೋಂಕಿನ ಮೂಲ ಪತ್ತೆಹಚ್ಚಲು ಅಕ್ಕುಳಮ್ ಪ್ರವಾಸಿ ಗ್ರಾಮದ ಈಜುಕೊಳವನ್ನು ಮುಚ್ಚಿ, ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸೋಂಕು ತಗುಲಿದ ಬಾಲಕ ಇತ್ತೀಚೆಗೆ ಅಲ್ಲಿ ಸ್ನಾನ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತಡೆಗಟ್ಟುವ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಹೇಳಿದ್ದಾರೆ. ನಿಂತ ನೀರು ಅಥವಾ ಹಸು-ಎಮ್ಮೆಗಳು ಸ್ನಾನ ಮಾಡುವ ಕಲುಷಿತ ನೀರಿನಲ್ಲಿ ಸ್ನಾನ ಮಾಡಬಾರದು ಎಂದು ಎಚ್ಚರಿಸಿದ್ದಾರೆ. ಬಾವಿಗಳು ಹಾಗೂ ಈಜುಕೊಳಗಳನ್ನು ಕ್ಲೋರಿನೀಕರಿಸುವುದು ಅನಿವಾರ್ಯ. ಮನೆಗಳಲ್ಲಿ ನೀರಿನ ಸಂಗ್ರಹಣಾ ಟ್ಯಾಂಕ್‌ಗಳನ್ನು ಸಹ ಸ್ವಚ್ಛವಾಗಿಡಬೇಕು ಎಂದು ಸಲಹೆ ನೀಡಿದ್ದಾರೆ.
ಅಮೀಬಾ ಸಾಮಾನ್ಯವಾಗಿ ಮೂಗಿನ ಮೂಲಕ ದೇಹಕ್ಕೆ ಪ್ರವೇಶಿಸಿ ಮೆದುಳಿಗೆ ತಲುಪುತ್ತದೆ. ಆದ್ದರಿಂದ ನೀರು ಮೂಗಿನೊಳಗೆ ಹೋಗದಂತೆ ಜಾಗ್ರತೆ ವಹಿಸಬೇಕೆಂದು ಸಾರ್ವಜನಿಕರಿಗೆ ಸೂಚಿಸಲಾಗಿದೆ.







