ಕೇರಳದ ಕಣ್ಣೂರಿನಲ್ಲಿ ಇಂದು ಬೆಳಿಗ್ಗೆ ಸಿಂಗಾಪುರ ಮೂಲದ ಕಾರ್ಗೋ ಹಡಗಿನಲ್ಲಿ (Cargo ship) ಭಾರೀ ಬೆಂಕಿ ಕಾಣಿಸಿಕೊಂಡಿದೆ. ಎಂವಿ ವಾನ್ ಹೈ 503 (MV WAN HAI 503) ಎಂಬ ಹಡಗಿನಲ್ಲಿ 22 ಮಂದಿ ಸಿಬ್ಬಂದಿಯಿದ್ದರು. ಅವರಲ್ಲಿ 18 ಮಂದಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಜಿಗಿದಿದ್ದಾರೆ. ಭಾರತೀಯ ನೌಕಾಪಡೆ ಹಾಗೂ ಕರಾವಳಿ ರಕ್ಷಣಾ ಪಡೆಗಳು ಅವರನ್ನು ಸುರಕ್ಷಿತವಾಗಿ ರಕ್ಷಿಸಿವೆ.
ಹಡಗಿನಲ್ಲಿ ಅಪಾಯಕಾರಿ ವಸ್ತುಗಳಾದ ದಹನಕಾರಿ ದ್ರವಗಳು, ಘನ ವಸ್ತುಗಳು, ಸ್ವಯಂ ದಹನಕಾರಿ ಹಾಗೂ ವಿಷಕಾರಿ ವಸ್ತುಗಳಿವೆ ಎಂಬ ಮಾಹಿತಿ ಬಂದಿದೆ. ಹಡಗು ಈಗ ಹೊತ್ತಿ ಉರಿಯುತ್ತಾ ಸಾಗುತ್ತಿದೆ.
ಈ ಹಡಗು ಮುಂಬೈಗೆ ಹೋಗುತ್ತಿದ್ದಾಗ ಬೆಂಕಿ ತಗುಲಿದ್ದು, ಬೆಳಗ್ಗೆ 10.30ಕ್ಕೆ ಕೊಚ್ಚಿ ನೌಕಾ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಮೊದಲಿಗೆ ಸ್ಫೋಟವಾಯಿತೆಂದು ಅನುಮಾನಗೊಂಡರು. ನಂತರ ಅದು ಬೆಂಕಿಯಿಂದ ಉಂಟಾದ ಅಪಘಾತ ಎಂದು ಸ್ಪಷ್ಟಪಡಿಸಲಾಗಿದೆ.
ಕೋಝಿಕ್ಕೋಡ್ ಜಿಲ್ಲೆಯ ಬೇಪೋರ್‌ನಲ್ಲಿ ಹಡಗಿನಲ್ಲಿ ಇದ್ದ ಸಿಬ್ಬಂದಿಯನ್ನು ತಲುಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಚೇತ್, ಅರ್ನ್ವೇಶ್, ಸಮುದ್ರ ಪ್ರಹರಿ, ಅಭಿನವ್, ರಾಜ್ದೂತ್ ಹಾಗೂ ಸಿ-144 ಹಡಗುಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.