Dhaka, Bangladesh : ಒಲಿಂಪಿಕ್ ಕಂಚಿನ ಪದಕ ವಿಜೇತ ಭಾರತ (India) ತಂಡ ಬುಧವಾರ ಬಾಂಗ್ಲಾದೇಶದ ಢಾಕಾ ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಪಂದ್ಯಾವಳಿಯಲ್ಲಿ (Asian Champions Trophy Men’s Hockey Tournament) ಮೂರು-ನಾಲ್ಕನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು (Pakistan) 4-3 ಗೋಲುಗಳಿಂದ ಸೋಲಿಸಿ ಕಂಚಿನ ಪದಕವನ್ನು (Bronze Medal) ಗೆದ್ದುಕೊಂಡಿತು. ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ವಿರುದ್ಧ 3-5 ಗೋಲುಗಳಿಂದ ಸೋತ ನಂತರ ಕಂಚಿನ ಪದಕದ ಹಣಾಹಣಿಯಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಬೇಕಾಗಿತ್ತು. ಕಳೆದ ಬಾರಿ ಮಸ್ಕತ್‌ನಲ್ಲಿ (Muscat) ಪಾಕಿಸ್ತಾನದ ಮೇಲೆ ಗೆದ್ದು ಟ್ರೋಫಿ ಪಡೆದು ಚಾಂಪಿಯನ್ ಆಗಿದ್ದ ಭಾರತ ಈ ಬಾರಿ ಕಂಚಿನ ಪದಕದೊಂದಿಗೆ ಮರಳಲಿದೆ.
ಭಾರತ ಮೊದಲ ನಿಮಿಷದಲ್ಲಿ ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಮೂಲಕ ಮುನ್ನಡೆ ಸಾಧಿಸಿದ ನಂತರ ಸುಮಿತ್ (45ನೇ), ವರುಣ್ ಕುಮಾರ್ (53ನೇ) ಮತ್ತು ಆಕಾಶದೀಪ್ ಸಿಂಗ್ (57ನೇ) ತಲಾ ಒಂದು ಗೋಲು ಸಾದಿಸಿದರು. ಪಾಕಿಸ್ತಾನದ ಕಡೆ ಗೋಲುಗಳನ್ನು ಅಫ್ರಾಜ್ (10ನೇ), ಅಬ್ದುಲ್ ರಾಣಾ (33ನೇ) ಮತ್ತು ಅಹ್ಮದ್ ನದೀಮ್ (57ನೇ) ಗಳಿಸಿದರು. ರೌಂಡ್-ರಾಬಿನ್ ಹಂತಗಳಲ್ಲಿ 3-1 ರಿಂದ ಸೋಲಿಸಿದ ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಇದು ಎರಡನೇ ಗೆಲುವು.
ಬುಧವಾರ ತಡರಾತ್ರಿ ನಡೆಯಲಿರುವ ಪಂದ್ಯಾವಳಿಯಲ್ಲಿ ಪದಕಕ್ಕೆ ದಕ್ಷಿಣ ಕೊರಿಯಾ (South Korea), ಜಪಾನ್ (Japan) ವಿರುದ್ಧ ಸೆಣಸಲಿದೆ.