Dandeli, Uttara Kannada : ದಾಂಡೇಲಿ ನಗರದ ಹಾಲಮಡ್ಡಿಯ ದಾಂಡೇಲಪ್ಪ ದೇವಸ್ಥಾನದ ಬಳಿ ₹3 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆಗಳ ಸಹಯೋಗದಲ್ಲಿ ನಿರ್ಮಾಣವಾಗಿರುವ ರಾಜ್ಯದ ಮೊದಲ ಹಾಗೂ ದೇಶದ ಎರಡನೇ ಮೊಸಳೆ ಉದ್ಯಾನವನ್ನು (Karnataka State’s First Crocodile Park) ಶಾಸಕ ಆರ್.ವಿ.ದೇಶಪಾಂಡೆ ಭಾನುವಾರ ಉದ್ಘಾಟಿಸಿದರು.
ಕಾಳಿ ನದಿಯ ತಟದಲ್ಲಿರುವ ಈ ತಾಣದಲ್ಲಿ ಮೊಸಳೆ ವೀಕ್ಷಣೆಯೊಂದಿಗೇ ಪ್ರವಾಸಿಗರ ಮನ ರಂಜನೆಗೆ ಅಗತ್ಯ ವ್ಯವಸ್ಥೆಯನ್ನೂ ಮಾಡಲಾಗಿದ್ದು ಉದ್ಯಾನದ ಆರಂಭದಲ್ಲಿ ಹಸಿರು ಹುಲ್ಲಿನ ಹಾಸು ಸ್ವಾಗತಿಸುತ್ತದೆ. ಮೊಸಳೆಯ ಬೃಹತ್ ಪ್ರತಿಕೃತಿ, ಜಿಂಕೆ, ಜಿರಾಫೆಗಳ ಪ್ರತಿಮೆಗಳು, ಆಸನ ವ್ಯವಸ್ಥೆಯಿರುವ ಪ್ಯಾರಾಗೋಲಾ, ಕಾರಂಜಿ, ಮಕ್ಕಳ ಆಟಿಕೆಗಳು, ಮರಳಿನ ಹೊಂಡಗಳೂ ಉದ್ಯಾನದಲ್ಲಿದೆ. ನೂರಾರು ಜನ ನಿಂತು ಮರಳಿನ ದಿಬ್ಬಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವ, ನದಿಯಲ್ಲಿ ವಿಹರಿಸುತ್ತಿರುವ ಮೊಸಳೆಗಳನ್ನು ನೋಡಲು ಮೂರು ಕಡೆಗಳಲ್ಲಿ ವೀಕ್ಷಣಾ ಗೋಪುರ ಅಳವಡಿಸಲಾಗಿದೆ.
ಪ್ರಸ್ತುತ ಉದ್ಯಾನದ ಮುಂಭಾಗಕ್ಕೆ ಉಚಿತ ಪ್ರವೇಶವಾಗಿದ್ದು, ಮೊಸಳೆ ವೀಕ್ಷಣೆಯ ಗೋಪುರಕ್ಕೆ ತೆರಳಲು ಕನಿಷ್ಠ ಪ್ರವೇಶ ದರ ವಿಧಿಸುವ ಸಾಧ್ಯತೆಯಿದೆ. ಪ್ರವೇಶ ದ್ವಾರದಿಂದ ಒಳಗೆ ಎರಡು ಎಕರೆ ಪ್ರದೇಶದಲ್ಲಿ ಉದ್ಯಾನವಿದ್ದು ಅದರ ಆಚೆಗೆ ಕಾಳಿ ನದಿಯಲ್ಲಿ ಮೊಸಳೆಗಳು ಇರುತ್ತವೆ. ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಸಮಯ ಸದ್ಯದಲ್ಲೇ ನಿರ್ಧಾರವಾಗಲಿದೆ. 2019ರಲ್ಲಿ ಉದ್ಯಾನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಕೋವಿಡ್ ಕಾರಣದಿಂದ ವಿಳಂಬವಾದ ಕಾಮಗಾರಿಯು, 2021ರ ಜೂನ್‌ನಲ್ಲಿ ಮುಕ್ತಾಯಗೊಂಡಿತ್ತು.