Tiruvanantapuram, Kerala: ದುಬೈ ನಿಂದ ಮರಳಿದ್ದ ಕೇರಳದ (Kerala) 38 ವರ್ಷದ ವ್ಯಕ್ತಿಯೋರ್ವನಲ್ಲಿ Mpox ಸೋಂಕು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.
ತೀವ್ರ ಜ್ವರದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದಿದ್ದ ವ್ಯಕ್ತಿಯ ದೇಹದ ಮೇಲೆ ಗುಳ್ಳೆಗಳು ಕಾಣಿಸಿಕೊಂಡಿದ್ದು, ಆತನಿಂದ ಸಂಗ್ರಹಿಸಿದ ಮಾದರಿಗಳನ್ನು ಅಧಿಕಾರಿಗಳು ದೃಢೀಕರಣಕ್ಕಾಗಿ ಪ್ರಯೋಗಾಲಯಕ್ಕೆ ಕಳಿಸಿದ್ದರು.
ಈಗ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ರಾಜ್ಯದಲ್ಲಿ ಚಿಕಿತ್ಸೆ ಮತ್ತು ಪ್ರತ್ಯೇಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ mpox ರೋಗಿಗಳನ್ನು ನಿರ್ವಹಿಸಲು ತಮ್ಮ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳನ್ನು ಗುರುತಿಸಿ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. COVID-19 ಅಥವಾ H1N1 ಇನ್ಫ್ಲುಯೆನ್ಸದಂತಹ ಗಾಳಿಯ ಮೂಲಕ ಹರಡುವ ಕಾಯಿಲೆಗಳಿಗಿಂತ ಭಿನ್ನವಾಗಿ, WHO ಪ್ರಕಾರ, ಸ್ಪರ್ಶ ಅಥವಾ ಲೈಂಗಿಕ ಚಟುವಟಿಕೆ ಸೇರಿದಂತೆ ಸೋಂಕಿತ ವ್ಯಕ್ತಿಯೊಂದಿಗೆ ನೇರ ದೈಹಿಕ ಸಂಪರ್ಕದ ಮೂಲಕ mpox ಪ್ರಾಥಮಿಕವಾಗಿ ಹರಡುತ್ತದೆ.
ಮಂಕಿಪಾಕ್ಸ್ ಸೋಂಕಿನ ಲಕ್ಷಣಗಳು:
ಈ ಸೋಂಕು ತಗುಲಿದ ನಂತರ ಆರರಿಂದ ಹದಿಮೂರು ದಿನಗಳಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಐದರಿಂದ ಇಪ್ಪತ್ತೊಂದು ದಿನಗಳ ಅವಧಿಯಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಜ್ವರ, ತೀವ್ರ ತಲೆನೋವು, ಹಾಲ್ರಸ ಗ್ರಂಥಿಗಳಲ್ಲಿ ಊತ, ಬೆನ್ನು ನೋವು, ಸ್ನಾಯು ನೋವು, ನಿತ್ರಾಣ, ಮುಖ, ಕೈ, ಕಾಲುಗಳು, ಹಸ್ತ ಮತ್ತು ಪಾದಗಳಲ್ಲಿ ದುದ್ದುಗಳು ಈ ರೋಗದ ಸಾಮಾನ್ಯ ಲಕ್ಷಣಗಳಾಗಿವೆ.
ಭಾರತದಲ್ಲಿ ಮೊದಲ ಬಾರಿಗೆ ಮಂಕಿಪಾಕ್ಸ್ (Mpox) ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ ಪರೀಕ್ಷೆಯನ್ನು ಪ್ರಾರಂಭಿಸಿದೆ. ಈ ಮೂಲಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.