Hoovina Hadagali (Huvina Hadagali), Vijayanagara : ಹೂವಿನಹಡಗಲಿ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ (Mylara) ಶುಕ್ರವಾರ ಸಂಜೆ ಅಪಾರ ಭಕ್ತರ ಜಯಘೋಷ, ಹರ್ಷೋದ್ಗಾರದ ನಡುವೆ ಪ್ರಸಕ್ತ ಸಾಲಿನ ಕಾರಣಿಕ (Mylara Lingeshwara Karnika) ನುಡಿ ಮೊಳಗಿತು.
ಸುಕ್ಷೇತ್ರದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರಿಂದ ಭಂಡಾರದ ಆಶೀರ್ವಾದ ಪಡೆದು ಸುಕ್ಷೇತ್ರದ ಪರಂಪರೆಯ ಸಂಕೇತವಾಗಿರುವ ಬಿಲ್ಲು ಏರಿದ ಗೊರವಯ್ಯ ರಾಮಣ್ಣ, ‘ಮಳೆ ಬೆಳೆ ಸಂಪಾಯಿತಲೇ ಪರಾಕ್’… ಕಾರಣಿಕ ನುಡಿದು ಪಶ್ಚಿಮ ದಿಕ್ಕಿಗೆ ಹಿಮ್ಮುಖವಾಗಿ ಜಿಗಿದರು.
‘ಪ್ರಸಕ್ತ ವರ್ಷದ ಕಾರಣಿಕ ನುಡಿ ಶುಭ ಸೂಚಕವಾಗಿದ್ದು ಈ ವರ್ಷ ಮಳೆ, ಬೆಳೆ ಸಮೃದ್ಧವಾಗಿ ರೈತರ ಬದುಕು ಹಸನಾಗಲಿದೆ. ಕೃಷಿ, ರಾಜಕೀಯ, ವಾಣಿಜ್ಯ ಸೇರಿದಂತೆ ಎಲ್ಲ ಕ್ಷೇತ್ರಕ್ಕೂ ಒಳಿತಾಗುವ ಸೂಚನೆ ಕಾಣಿಸುತ್ತದೆ’ ಎಂದು ಭವಿಷ್ಯವಾಣಿಯನ್ನು ವಿಶ್ಲೇಷಿಸಲಾಗಿದೆ.
ಮೈಲಾರಲಿಂಗೇಶ್ವರ ಸ್ವಾಮಿಯ ಭಕ್ತರ ಭಾವನೆಗಳನ್ನು ಗೌರವಿಸಿ ನಿರ್ಬಂಧ ಸಡಿಲಿಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮೇರೆಗೆ ಶುಕ್ರವಾರ ಮುಂಜಾನೆಯಿಂದ ನಿರ್ಬಂಧ ತೆರವುಗೊಳಿಸಿದ್ದರಿಂದ ಲಕ್ಷಾಂತರ ಭಕ್ತರು ಸುಕ್ಷೇತ್ರಕ್ಕೆ ಆಗಮಿಸಿದ್ದರು. ಡೆಂಕನಮರಡಿ ತುಂಬ ಜನ ಸಾಗರ ಸೇರಿದ್ದರಿಂದ ಈ ಹಿಂದಿನ ಸಂಭ್ರಮ ಮರಳಿತ್ತು.
ಕಾಗಿನೆಲೆ ಕನಕ ಪೀಠದ ನಿರಂಜನಾನಂದ ಸ್ವಾಮೀಜಿ, ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾಧಿಕಾರಿ ಅನಿರುದ್ಧ ಪಿ.ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ಅರುಣ್ ಮತಿತ್ತರರು ಉಪಸ್ಥಿತರಿದ್ದರು.