Bengaluru: ದೀಪಾವಳಿ ಹಬ್ಬದ (Deepavali Festival) ವೇಳೆ ಹಸಿರು ಪಟಾಕಿಗೆ (Green Crackers) ಮಾತ್ರ ಅವಕಾಶ ನೀಡಬೇಕು. ಪಟಾಕಿ ಅವಘಡ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೂಚನೆ ನೀಡಿದ್ದಾರೆ.
ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಗೆ ಅವಕಾಶ ನೀಡಬಾರದು. ಟಾಕಿ ದಾಸ್ತಾನು, ಮಾರಾಟ ಪ್ರಕ್ರಿಯೆಯಲ್ಲಿ ಲೋಪ ಆಗಬಾರದು. ಸುರಕ್ಷತೆ ವಿಷಯದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಿ.
ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ಸೂಚನೆ ನೀಡಿದರು.
ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬೇಕು. ಅಧಿಕಾರಿಗಳು ಪಟಾಕಿ ದಾಸ್ತಾನುಗಳ ಪರಿಶೀಲನೆ ಮಾಡಬೇಕು. ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಾಟ ಮಾಡಬಾರದು. ನಿಯಮ ಮೀರಿದರೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಳೆದ ವರ್ಷ ಹಾವೇರಿಯ ಆಲದಟ್ಟಿ ಮತ್ತು ಅತ್ತಿಬೆಲೆಯಲ್ಲಿ ಪಟಾಕಿ ದುರಂತ ಸಂಭವಿಸಿದ ಬಳಿಕ ಕರ್ನಾಟಕ ಸರ್ಕಾರ ಪಟಾಕಿ ಮಾರಾಟ ಮತ್ತು ಹಾರಿಸಲು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿತ್ತು.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮತ್ತು ಸುಪ್ರೀಂಕೋರ್ಟ್ ತನ್ನ ಹಲವು ತೀರ್ಪುಗಳಲ್ಲಿ 125 ಡೆಸಿಬಲ್ಗಿಂತ ಹೆಚ್ಚು ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮುವ ರಾಸಾಯನಿಕಯುಕ್ತ ಪಟಾಕಿಗಳನ್ನು ನಿಷೇಧಿಸಿದೆ. ತೀರ್ಪಿನಂತೆ ಈ ನಿಯಮ ರಾಜ್ಯದಲ್ಲೂ ಅನ್ವಯವಾಗುತ್ತದೆ. ಮತ್ತು ರಾತ್ರಿ 8 ರಿಂದ 10ಗಂಟೆವೆಗೆ ಮಾತ್ರ ಹಸಿರು ಪಟಾಕಿಗಳನ್ನು ಹಚ್ಚಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.