
Karachi: ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ತೀವ್ರಗೊಂಡಿದ್ದು, ಕ್ರಿಕೆಟ್ ಮಂಡಳಿಗೂ ನಷ್ಟ ಉಂಟಾಗಿದೆ. ಈ ಕಾರಣದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB-Pakistan Cricket Board) ದೇಶಿ ಕ್ರಿಕೆಟಿಗರ ವೇತನವನ್ನು ಕಡಿತಗೊಳಿಸಲು ನಿರ್ಧರಿಸಿದೆ.
ಮುಂಬರುವ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಆಟಗಾರರು ಪ್ರತಿ ಪಂದ್ಯಕ್ಕೆ ₹1 ಲಕ್ಷ ಬದಲು ಕೇವಲ ₹10,000 ಮಾತ್ರ ಪಡೆಯಲಿದ್ದಾರೆ. ಮೀಸಲು ಆಟಗಾರರಿಗೆ ₹5,000 ಮಾತ್ರ ಸಿಗಲಿದೆ. ಇತ್ತೀಚೆಗೆ ಪಂಚತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದ ಆಟಗಾರರು ಈಗ ಸಾಮಾನ್ಯ ಹೋಟೆಲ್‌ಗಳಲ್ಲಿ ಉಳಿಯಬೇಕಾಗಿದೆ. ಅಲ್ಲದೆ, ವಿಮಾನ ಪ್ರಯಾಣಕ್ಕೂ ಪಿಸಿಬಿ ಕಡಿವಾಣ ಹಾಕಲಿದೆ.
ಆಟಗಾರರ ವೇತನ ಕಡಿತಗೊಂಡಿದ್ದರೂ, ಪಿಸಿಬಿ ಆಯ್ಕೆ ಸಮಿತಿ ಸದಸ್ಯರು ಹಾಗೂ ಕೋಚ್‌ಗಳ ವೇತನವನ್ನು ಹೆಚ್ಚಿಸಿದೆ ಎಂಬ ವರದಿ ಹೊರಬಿದ್ದಿದೆ.
ಆರ್ಥಿಕ ಸಂಕಷ್ಟದಲ್ಲಿದ್ದರೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ್ದ ಪಿಸಿಬಿ ಈಗ ಹೆಚ್ಚಿನ ನಷ್ಟಕ್ಕೆ ಗುರಿಯಾಗಿದೆ. ಭಾರತ ತಂಡ ಪಾಕಿಸ್ತಾನ ಪ್ರವಾಸ ನಿರಾಕರಿಸಿದ ಕಾರಣ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು. ಸ್ಟೇಡಿಯಂ ಅಭಿವೃದ್ಧಿಗೆ ಸಾವಿರಾರು ಕೋಟಿ ಖರ್ಚು ಮಾಡಲಾಗಿತ್ತು. ಆದರೆ ಪಾಕಿಸ್ತಾನ ತಂಡ ನಿರಾಶಾಜನಕ ಪ್ರದರ್ಶನ ನೀಡಿ ಗ್ರೂಪ್ ಹಂತದಲ್ಲೇ ಹೊರಬಿದ್ದ ಕಾರಣ ಸೆಮಿಫೈನಲ್ ಮತ್ತು ಫೈನಲ್ ದುಬೈನಲ್ಲಿ ನಡೆಯಿತು. ಈ ಪರಿಣಾಮ ಪಾಕಿಸ್ತಾನಕ್ಕೆ ಹೆಚ್ಚಿನ ಹಣಹಾನಿ ಉಂಟಾಗಿದೆ.