
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಏಪ್ರಿಲ್ 5ರಂದು ಶ್ರೀಲಂಕಾಗೆ (Sri Lanka) ಭೇಟಿ ನೀಡಲಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಶುಕ್ರವಾರ ಸಂಸತ್ತಿನಲ್ಲಿ ಘೋಷಿಸಿದರು. ದೇಶದ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಈ ಭೇಟಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಕಳೆದ ವಾರ, ವಿದೇಶಾಂಗ ಸಚಿವೆ ವಿಜಿತಾ ಹೆರಾತ್ ಅವರು, ಅಧ್ಯಕ್ಷ ದಿಸಾನಾಯಕೆ ಅವರ ದೆಹಲಿ ಭೇಟಿಯ ಸಂದರ್ಭದಲ್ಲಿ ನಡೆದ ಒಪ್ಪಂದಗಳನ್ನು ಅಂತಿಮಗೊಳಿಸಲು ಮೋದಿ ಶ್ರೀಲಂಕಾಗೆ ಆಗಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಭೇಟಿಯ ಸಮಯದಲ್ಲಿ, ಶ್ರೀಲಂಕಾದ ತ್ರಿಕೋನಮಲಿಯ ಪೂರ್ವ ಬಂದರು ಜಿಲ್ಲೆಯಲ್ಲಿ ಸಂಪೂರ್ ವಿದ್ಯುತ್ ಸ್ಥಾವರ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದು ದಿಸಾನಾಯಕೆ ಸಂಸತ್ತಿಗೆ ತಿಳಿಸಿದ್ದಾರೆ.
ಭಾರತ-ಶ್ರೀಲಂಕಾ ಒಪ್ಪಂದ
ಕಳೆದ ತಿಂಗಳು, ಶ್ರೀಲಂಕಾ ಮತ್ತು ಭಾರತವು ದ್ವೀಪ ದೇಶದಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿವೆ ಎಂದು ಆರೋಗ್ಯ ಸಚಿವೆ ನಲಿಂದಾ ಜಯಥಿಸ್ಸಾ ಘೋಷಿಸಿದರು. ಈ ಒಪ್ಪಂದದ ಪ್ರಕಾರ, ತ್ರಿಕೋನಮಲಿಯ ಸಂಪೂರ್ನಲ್ಲಿ 50 ಮೆಗಾವ್ಯಾಟ್ (ಹಂತ 1) ಮತ್ತು 70 ಮೆಗಾವ್ಯಾಟ್ (ಹಂತ 2) ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲಾಗುತ್ತದೆ.
ಮೂಲತಃ, ಭಾರತ ಸರ್ಕಾರದ NTPC ಸಂಸ್ಥೆ ಕಲ್ಲಿದ್ದಲು ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿತ್ತು. ಆದರೆ ಈಗ, ಹೊಸ ಜಂಟಿ ಯೋಜನೆಯ ಮೂಲಕ ಅದನ್ನು ಸೌರ ವಿದ್ಯುತ್ ಕೇಂದ್ರವಾಗಿ ಪರಿವರ್ತಿಸಲಾಗುತ್ತಿದೆ.