
Bhopal: ಮುಂದಿನ ಹಲವು ವರ್ಷಗಳಲ್ಲಿ ಭಾರತ (India) ವಿಶ್ವದ ಅತಿವೇಗವಾಗಿ ಬೆಳೆಯುವ ಆರ್ಥಿಕತೆಯ ದೇಶವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಕುರಿತು ವಿಶ್ವಬ್ಯಾಂಕ್ ವರದಿಯ ಉದಾಹರಣೆ ನೀಡಿದರು.
ಭಾರತ ಈಗ ಜಾಗತಿಕ ಏರೋಸ್ಪೇಸ್ ಕಂಪನಿಗಳಿಗೆ ಪ್ರಮುಖ ಸರಬರಾಜು ಸರಪಳಿಯಾಗಿ ರೂಪುಗೊಂಡಿದೆ. “ಭಾರತದಲ್ಲಿ ಭವಿಷ್ಯ ಅಡಕವಾಗಿದೆ, ಭಾರತವೇ ಜಗತ್ತಿಗೆ ಪರಿಹಾರ ನೀಡುವ ರಾಷ್ಟ್ರ” ಎಂದು ಮೋದಿ ಹೇಳಿದರು.
‘Invest MP, Global Investors Summit 2025’’ ಸಮಾರಂಭವನ್ನು ಪ್ರಧಾನಿ ಇಂದು ಉದ್ಘಾಟಿಸಿದರು. 60ಕ್ಕೂ ಹೆಚ್ಚು ದೇಶಗಳ ಉದ್ಯಮಿಗಳು, ರಾಯಭಾರಿಗಳು ಮತ್ತು ಬಿರ್ಲಾ, ಅದಾನಿ, ಗೋದ್ರೇಜ್, ಕಲ್ಯಾಣಿ ಮುಂತಾದ ಪ್ರಮುಖ ಉದ್ಯಮ ಕುಟುಂಭಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.
“ಡಬಲ್ ಎಂಜಿನ್ ಸರ್ಕಾರ ಬಂದ ನಂತರ ರಾಜ್ಯದ ಅಭಿವೃದ್ಧಿಯ ವೇಗ ಹೆಚ್ಚಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಮಧ್ಯಪ್ರದೇಶ ಪ್ರಮುಖ ಕೇಂದ್ರವಾಗುತ್ತಿದೆ” ಎಂದು ಮೋದಿ ಹೇಳಿದರು. ಇದೇ ಸಂದರ್ಭದಲ್ಲಿ, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ ಮಾಡಿದರು.
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, 1.10 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಮಾಡುವ ಯೋಜನೆ ಘೋಷಿಸಿದ್ದು, 2030ರೊಳಗೆ 1.2 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.