Thiruvananthapuram: ನೋಂದಣಿ ಇಲ್ಲದೇ ಏಕಾಏಕಿ ಬರುವ ಭಕ್ತರನ್ನು ನಿಯಂತ್ರಿಸಿ ನೂಕುನುಗ್ಗಲು ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಕೇರಳ ಸರ್ಕಾರವು ಶಬರಿ ಮಲೆ (Sabarimala) ದರ್ಶನಕ್ಕೆ ಬರುವವರಿಗೆ ಈ ವರ್ಷದಿಂದ ಆನ್‌ಲೈನ್ (online) ನೋಂದಣಿ ಕಡ್ಡಾಯಗೊಳಿಸಿತ್ತು.
ಆನ್‌ಲೈನ್ ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡುವುದಾಗಿ ಆದೇಶ ಜಾರಿಗೊಳಿಸಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದರಿಂದ ನೋಂದಣಿಯಲ್ಲಿ ಕೆಲವು ವಿನಾಯಿತಿ ನೀಡಿದೆ.
ಆನ್‌ಲೈನ್ ನೋಂದಣಿ ಇಲ್ಲದೇ ಇದ್ದರೂ ಸ್ಪಾಟ್ ನೋಂದಣಿ ಮೂಲಕ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ದರ್ಶನ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ ಭಕ್ತರು ನಿರಾಳವಾಗಲಿದ್ದಾರೆ.
ವರ್ಚುವಲ್ ಆಗಿ ಕ್ಯೂ ಬುಕಿಂಗ್ ಮಾಡದೆ ಆಗಮಿಸಿದ್ದರೂ ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಅಯ್ಯಪ್ಪ ದೇವಸ್ಥಾನದಲ್ಲಿ ಸುಗಮ ದರ್ಶನ ವ್ಯವಸ್ಥೆ ಮಾಡಲಾಗುವುದು.
ಶಬರಿಮಲೆಗೆ ಭೇಟಿ ನೀಡುವ ಯಾವ ಭಕ್ತರೂ ನಿರಾಶರಾಗುವುದು ಬೇಡ ಎಂದು ಕೇರಳ ಸರಕಾರ ಕೊನೆಗೂ ಸ್ಪಷ್ಟನೆ ನೀಡಿದೆ.
ಆನ್‌ಲೈನ್ ನೋಂದಣಿ ಹಾಗೂ ದಿನಕ್ಕೆ ದರ್ಶನಕ್ಕೆ ಮಿತಿ ಹೇರುವ ಆದೇಶಕ್ಕೆ ಕೇರಳ ಕಾಂಗ್ರೆಸ್ ಹಾಗೂ CPIM ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಬದಲಾವಣೆ ಮಾಡುವಂತೆಯು ಮನವಿ ಸಲ್ಲಿಸಿದ್ದವು. ಆನಂತರ ಬದಲಾವಣೆ ಮಾಡಲಾಗಿದೆ.
ಈಗ ಸ್ಪಾಟ್ ಬುಕ್ಕಿಂಗ್ ಕೇಂದ್ರಗಳೂ ಇರಲಿವೆ. ಅಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಆನಂತರವೂ ಅವಕಾಶ ಆಗದೇ ಇದ್ದರೆ ವಿಶೇಷ ದರ್ಶನವೂ ಇರಲಿದ್ದು. ಪ್ರತಿ ಭಕ್ತರಿಗೂ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎನ್ನುವುದು ವಿವಾದದ ನಂತರ ಸರ್ಕಾರ ನೀಡಿರುವ ಸ್ಪಷ್ಟನೆ.