Kembhavi, Yadgir : ಕೆಂಭಾವಿಯ ಉತ್ತರಾದಿ ಮಠದಲ್ಲಿ ಭಾನುವಾರ ನಾಲ್ಕು ದಿನ ನಡೆದ ರಘೋತ್ತಮ ತೀರ್ಥರ ಆರಾಧನೆಯ (Uttaradimath Raghuttama Tirtha Aradhana Mahotsava) ಅಂಗವಾಗಿ ರಥೋತ್ಸವ ಜರುಗಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮುತ್ತಿಗಿ ಕ್ಷೇತ್ರದ ಪಂಡಿತ್ ನರಹರಿ ಆಚಾರ್ಯ “ಮನುಷ್ಯ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಲು ಭಾಗವತಾದಿ ಗ್ರಂಥಗಳ ಶ್ರವಣ, ದೇವರ ಹಾಗೂ ಗುರುಗಳ ಮೇಲೆ ಭಕ್ತಿ ಇರಿಸಬೇಕು. ಸತ್ಕಾರ್ಯಗಳಿಂದ ಭಗವಂತನ ಪ್ರೇರಣೆ ಪಡೆದು ಮೋಕ್ಷ ಪ್ರಾಪ್ತಿ ಕಂಡುಕೊಳ್ಳಬೇಕು. ದಾಸರು ಭಗವಂತನ ಕುರಿತು ಅನೇಕ ಕೀರ್ತನೆಗಳನ್ನು ರಚಿಸಿದ್ದು, ಅವುಗಳನ್ನು ಹಾಡುವ ಮೂಲಕ ಭಗವಂತನ ನಾಮಸ್ಮರಣೆ ಮಾಡಿ ಪುಣ್ಯಕ್ಷೇತ್ರಗಳ ದರ್ಶನ ಸೇರಿದಂತೆ ಭಗವಂತನ ಸಾಮಿಪ್ಯ ಹೊಂದುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದರು.
ಆರಾಧನಾ ಮಹೋತ್ಸವದಲ್ಲಿ ಸುಪ್ರಭಾತ, ಅಷ್ಟೋತ್ತರ, ಪಂಚಾಂಮೃತ, ಯತಿಚತುಷ್ಟಯರ ವೃಂದಾವನಕ್ಕೆ ಹೂಗಳಿಂದ ವಿಶೇಷ ಅಲಂಕಾರ, ಪಲ್ಲಕ್ಕಿ ಸೇವೆ, ರಥೋತ್ಸವ, ತೀರ್ಥಪ್ರಸಾದ, ಕಲಾವಿದರಿಂದ ಸಂಗೀತ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಯಾಚಾರ್ಯ ಪುರೋಹಿತ ಹಾಗೂ ತಿರುಮಲಾಚಾರ್ಯ ಜೋಶಿ ಅವರು ಅನ್ನಸಂತರ್ಪಣೆ ಮಾಡಿದರು. ಜಯಸತ್ಯಪ್ರಮೋದ ಸೇವಾ ಸಂಘದ ಪದಾಧಿಕಾರಿಗಳು, ರಘೋತ್ತಮ ಭಜನಾ ಮಂಡಳಿ, ಪ್ರಮೋದಿನಿ ಮಹಿಳಾ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.