Bengaluru : ಬೆಂಗಳೂರು KPCC ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ Yuva Congress ನೂತನ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ (Mohammed Nalapad) ಗುರುವಾರ ಅಧಿಕಾರ ಸ್ವೀಕರಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D. K. Shivakumar) ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಮೊಹಮ್ಮದ್ ನಲಪಾಡ್ ರವರಿಗೆ ಕಾಂಗ್ರೆಸ್ ಧ್ವಜ ನೀಡಿದರು.
ಕಾರ್ಯಕರ್ಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ” ಸಂಘ ಪರಿವಾರದವರು ಕೇವಲ ಉಡುಪಿ, ಮಂಗಳೂರು ಅಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ವಿಷ ಹಾಕಿದ್ದಾರೆ, ಬೆಂಕಿ ಹಚ್ಚಿ ಚುನಾವಣೆಗೆ ವರ್ಷ ಇರುವಾಗಲೇ ಹಿಜಾಬ್ ವಿಚಾರ ಮುಂದಿಟ್ಟು ಮಕ್ಕಳ ಮನಸ್ಸಿನಲ್ಲಿ ಬಿಜೆಪಿಯವರು ದ್ವೇಷ ತುಂಬಿ, ಸಮಾಜ ಒಡೆಯಲು ಹೊರಟಿದ್ದಾರೆ. ಹಿಜಾಬ್ ಹಾಕುವುದನ್ನೇ ವಿವಾದವಾಗಿ ಮಾಡಿ ಮತ ಕ್ರೋಡೀಕರಣಕ್ಕೆ ಬಿಜೆಪಿಯವರು ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, “ಯಶಸ್ಸು ಸಾಧಿಸಬೇಕಾದರೆ ಧರ್ಮರಾಯನ ಧರ್ಮ, ಕರ್ಣನ ದಾನತ್ವ, ಅರ್ಜುನನ ಗುರಿ, ವಿಧುರನ ನೀತಿ, ಭೀಮನ ಬಲ, ಕೃಷ್ಣನ ತಂತ್ರ ಇರಬೇಕಂತೆ. ಅದೇ ರೀತಿ ನೀವು ಯಶಸ್ಸು ಸಾಧಿಸಬೇಕಾದರೆ ಅನೇಕ ಗುಣಗಳನ್ನು ರೂಢಿಸಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದು, ರಾಹುಲ್ ಗಾಂಧಿ ಅವರನ್ನು 2024ರಲ್ಲಿ ಪ್ರಧಾನಿಯಾಗಿ ಮಾಡುವುದು ಗುರಿಯಾಗಿರಬೇಕು” ಎಂದು ತಿಳಿಸಿದರು.
ನನ್ನಿಂದ ಒಂದು ತಪ್ಪು ಆಗಿತ್ತು. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದರೂ ಅಧಿಕಾರ ಸಿಗದಿದ್ದಾಗ ತಪ್ಪು ಅರಿವಾಯಿತು. ಯೂತ್ ಕಾಂಗ್ರೆಸ್ ಅನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಬೇಕೆಂಬ ಕಾರ್ಯಸೂಚಿ ನನ್ನಲ್ಲಿದೆ ಎಂದು ಮೊಹಮ್ಮದ್ ನಲಪಾಡ್ ತಿಳಿಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಆರ್. ಧ್ರುವನಾರಾಯಣ ಉಪಸ್ಥಿತರಿದ್ದರು.