Bengaluru: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (Bangalore Electricity Supply Company-BESCOM) ತನ್ನ ಆನ್ಲೈನ್ ಸೇವೆಗಳನ್ನು (online services) ಅಕ್ಟೋಬರ್ 4 ರಿಂದ ಮೂರು ದಿನಗಳವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಬೆಸ್ಕಾಂನ ಐಟಿ ವಿಭಾಗದಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ನಿಮಿತ್ತ ಅಕ್ಟೋಬರ್ 4ರ ರಾತ್ರಿ 9 ಗಂಟೆಯಿಂದ ಅಕ್ಟೋಬರ್ 7ರ ಬೆಳಿಗ್ಗೆ 06 ಗಂಟೆವರೆಗೆ ಆರ್.ಎ.ಪಿ.ಡಿ.ಆರ್.ಪಿ ನಗರ ಪ್ರದೇಶದ ಗ್ರಾಹಕರಿಗೆ ಆನ್ಲೈನ್ ಸೇವೆಗಳು ಲಭ್ಯವಿರುವುದಿಲ್ಲ.
ಹಾಗೆಯೇ ಬೆಸ್ಕಾಂ ಕ್ಯಾಶ್ ಕೌಂಟರ್ ಗಳಲ್ಲಿ ಬಿಲ್ ಪಾವತಿಸಲು ಸಾಧ್ಯವಿರುವುದಿಲ್ಲ. ಅಕ್ಟೋಬರ್ 5ರ ಬೆಳಗ್ಗೆ 11ರ ನಂತರ ವಿದ್ಯುತ್ ಬಿಲ್ ಪಾವತಿ ಕಾರ್ಯ ಪುನರಾರಂಭಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
“30,000 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣಗಳನ್ನು ಒಳಗೊಂಡಿರುವ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಭಾಗ-ಎ ಐಟಿ ಯೋಜನೆಯ ಅನುಷ್ಠಾನಕ್ಕೆ ಬೆಸ್ಕಾಂ ನೋಡಲ್ ಏಜೆನ್ಸಿಯಾಗಿದೆ. ಹೊಸ ಅಪ್ಲಿಕೇಶನ್ಗಳು ಅಕ್ಟೋಬರ್ 7ರ ಬೆಳಗ್ಗೆ 6ರವರೆಗೆ ಕಾರ್ಯನಿರ್ವಹಿಸಿದ ನಂತರ ಅಪ್ಲಿಕೇಶನ್ ದಕ್ಷತೆ ಹೆಚ್ಚಲಿದೆ. ಇದರಿಂದಾಗಿ, ಬಳಕೆದಾರರಿಗೂ ಉತ್ತಮ ಸೇವೆ ಲಭ್ಯವಾಗಲಿದೆ,” ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಈ ನಗರಗಳಲ್ಲಿ ಆನ್ಲೈನ್ ಸೇವೆ ಇರುವುದಿಲ್ಲ
ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಸಿರಾ, ಚನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, KGF, ಚಳ್ಳಕೆರೆ, ಕುಣಿಗಲ್, ಹರಪ್ಪನಹಳ್ಳಿ, ಹರಿಹರ, ಹಿರಿಯೂರು, ತಿಪಟೂರು ಹಾಗೂ ಗೌರಿಬಿದನೂರು.