
ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿರುವ ನೊಬೆಲ್ ಅಸೆಂಬ್ಲಿಯು (The Nobel Assembly at Karolinska Institutet) 2023 ರ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೊಬೆಲ್ ಪ್ರಶಸ್ತಿ (Nobel Prize in Physiology or Medicine) ವಿಜೇತರನ್ನು ಘೋಷಿಸಿದೆ. ಅವರೇ ಕ್ಯಾಟಲಿನ್ ಕಾರಿಕೋ ಮತ್ತು ಡ್ರೂ ವೈಸ್‌ಮನ್ (Katalin Karikó and Drew Weissman). COVID-19 ವಿರುದ್ಧ mRNA ಲಸಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ನ್ಯೂಕ್ಲಿಯೊಸೈಡ್ ಬೇಸ್ ಬದಲಾವಣೆಗಳು ಎಂದು ಕರೆಯಲ್ಪಡುವ ಆನುವಂಶಿಕ ವಸ್ತುಗಳ ಕೆಲವು ಭಾಗಗಳನ್ನು ಹೇಗೆ ಬದಲಾಯಿಸುವುದು ಎಂಬುದರ ಕುರಿತು ಈ ಇಬ್ಬರು ವಿಜ್ಞಾನಿಗಳು ಕಾರ್ಯ ನಿರ್ವಹಿಸಿದ್ದರು.
ಏನಿದರ ಮಹತ್ವ?
ಫೈಜರ್ ಮತ್ತು ಮಾಡರ್ನಾದಿಂದ ಬಂದಂತಹ COVID-19 mRNA ಲಸಿಕೆಗಳನ್ನು ಸಾಧ್ಯವಾಗಿಸುವಲ್ಲಿ ಕಾರಿಕೋ ಮತ್ತು ವೈಸ್‌ಮನ್‌ರ ಕೆಲಸವು ನಿರ್ಣಾಯಕವಾಗಿತ್ತು. ಈ ಲಸಿಕೆಗಳು 2020 ರ ಆರಂಭದಲ್ಲಿ ಪ್ರಾರಂಭವಾದ COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಲಸಿಕೆಗಳ ಕಾರ್ಯ
ಲಸಿಕೆಗಳು ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ತರಬೇತಿ ಇದ್ದಂತೆ. ನಿರ್ದಿಷ್ಟ ರೋಗಗಳನ್ನು ಗುರುತಿಸಲು ಮತ್ತು ಹೋರಾಡಲು ಅವು ನಿಮ್ಮ ದೇಹಕ್ಕೆ ಅಭ್ಯಾಸ ಮಾಡಿಸುತ್ತವೆ. ಹಿಂದೆ, ನಾವು ಪೋಲಿಯೊ, ದಡಾರ ಮತ್ತು ಹಳದಿ ಜ್ವರದಂತಹ ದುರ್ಬಲಗೊಂಡ ಅಥವಾ ಕೊಲ್ಲಲ್ಪಟ್ಟ ವೈರಸ್‌ಗಳಿಂದ ತಯಾರಿಸಿದ ಲಸಿಕೆಗಳನ್ನು ಬಳಸಿದ್ದೇವೆ. ನಂತರ, ನಾವು ವೈರಸ್‌ನ ಪ್ರೋಟೀನ್‌ಗಳಂತಹ ಭಾಗಗಳಿಂದ ಲಸಿಕೆಗಳನ್ನು ತಯಾರು ಮಾಡುತ್ತ ಬಂದಿದ್ದೇವೆ, ಈ ಲಸಿಕೆಗಳು ವೈರಸ್ ವಿರುದ್ಧ ಹೋರಾಡಲು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಇವುಗಳ ಉದಾಹರಣೆಗಳಲ್ಲಿ ಹೆಪಟೈಟಿಸ್ ಬಿ ಮತ್ತು ಹ್ಯೂಮನ್ ಪ್ಯಾಪಿಲೋಮವೈರಸ್‌ಗೆ ಲಸಿಕೆಗಳು ಸೇರಿವೆ. ಜೊತೆಗೆ ಎಬೋಲಾ ವೈರಸ್‌ನಂತಹ ಕಾಯಿಲೆಗಳನ್ನು ಹೋರಾಡಲು ನಿರುಪದ್ರವ ವೈರಸ್‌ನ ತುಣುಕುಗಳನ್ನು ಸಾಗಿಸುವಂತಹ ಲಸಿಕೆಗಳೂ ಇವೆ.
ಸಾಂಪ್ರದಾಯಿಕ ಲಸಿಕೆಗಳೊಂದಿಗೆ ಸವಾಲು
ಈ ಲಸಿಕೆಗಳನ್ನು ತಯಾರಿಸುವುದು ಸಾಮಾನ್ಯವಾಗಿ ಲ್ಯಾಬ್‌ನಲ್ಲಿ ಸಾಕಷ್ಟು ಕೋಶಗಳನ್ನು ಬೆಳೆಸುವುದನ್ನು ಒಳಗೊಂಡಿರುತ್ತದೆ, ಇದು ದೀರ್ಘ ಸಮಯ ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ, COVID-19 ನಂತಹ ಹೊಸ ರೋಗಗಳು ಕಾಣಿಸಿಕೊಂಡಾಗ, ಲಸಿಕೆಗಳನ್ನು ತಯಾರಿಸಲು ನಮಗೆ ವೇಗವಾದ ಮಾರ್ಗಗಳು ಬೇಕಾಗುತ್ತವೆ.
mRNA ಲಸಿಕೆಗಳ ಭರವಸೆ
ನಮ್ಮ ಜೀವಕೋಶಗಳಲ್ಲಿ, DNA ಆನುವಂಶಿಕ ಮಾಹಿತಿಯನ್ನು ಹೊಂದಿರುತ್ತದೆ ಮತ್ತು mRNA ಈ ಮಾಹಿತಿಯನ್ನು ಬಳಸಿಕೊಂಡು ಪ್ರೋಟೀನ್‌ಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. 1980 ರ ದಶಕದಲ್ಲಿ, “ಇನ್ ವಿಟ್ರೊ ಟ್ರಾನ್ಸ್‌ಕ್ರಿಪ್ಷನ್” ಎಂದು ಕರೆಯಲ್ಪಡುವ ಜೀವಕೋಶಗಳ ಹೊರಗೆ mRNA ಮಾಡಲು ವಿಜ್ಞಾನಿಗಳು ಮಾರ್ಗಗಳನ್ನು ಕಂಡುಕೊಂಡರು. ಇದು ಜೀವಶಾಸ್ತ್ರಕ್ಕೆ ದೊಡ್ಡ ವಿಷಯವಾಗಿತ್ತು. ಆದರೆ mRNA ಅನ್ನು ಔಷಧವಾಗಿ ಬಳಸುವುಕ್ಕೆ ಹಿಂದೆ ಸವಾಲುಗಳಿದ್ದವು.
ಕ್ಯಾಟಲಿನ್ ಕಾರಿಕೋ
ಹಂಗೇರಿಯ ವಿಜ್ಞಾನಿ ಕ್ಯಾಟಲಿನ್ ಕರಿಕೋ, ಔಷಧಕ್ಕಾಗಿ mRNA ಅನ್ನು ಉಪಯೋಗ ಮಾಡಲು ನಿರ್ಧರಿಸಿದರು. 1990 ರ ದಶಕದ ಆರಂಭದಲ್ಲಿ, ಅವರು ರೋಗನಿರೋಧಕ ತಜ್ಞ ಡ್ರೂ ವೈಸ್ಮನ್ ಅವರೊಂದಿಗೆ ಜೊತೆಗೂಡಿ ಹೆಚ್ಚಿನ ಸಂಶೋದನೆಯಲ್ಲಿ ತೊಡಗಿಸಿಕೊಂಡರು. ನಮ್ಮ ಪ್ರತಿರಕ್ಷಣಾ ಕೋಶಗಳು ಕೆಲವು ರೀತಿಯ mRNA ಯನ್ನು ಹೊರಗಿನವನ್ನಾಗಿ ಪರಿಗಣಿಸುತ್ತವೆ, ಉರಿಯೂತವನ್ನು ಉಂಟುಮಾಡುತ್ತವೆ ಎಂದು ಅವರು ಕಂಡುಹಿಡಿದರು. ಬೇಸ್ ಎಂದು ಕರೆಯಲ್ಪಡುವ mRNA ಯ ರಾಸಾಯನಿಕ ಬಿಲ್ಡಿಂಗ್ ಬ್ಲಾಕ್ಸ್‌ನಲ್ಲಿ ವ್ಯತ್ಯಾಸವಿದೆ ಎಂದು ಅವರು ಅರಿತುಕೊಂಡರು.
ಆರ್‌ಎನ್‌ಎ ನಾಲ್ಕು ಬೇಸ್‌ಗಳನ್ನು ಹೊಂದಿದೆ: A, U, G ಮತ್ತು ಸC. ಲ್ಯಾಬ್‌ಗಳಲ್ಲಿ ಮಾಡಿದ mRNA ನಮ್ಮ ಕೋಶಗಳಲ್ಲಿ ಮಾಡಿದ mRNA ಯಲ್ಲಿ ಸಾಮ್ಯತೆಯನ್ನು ಅವರು ಕಂಡುಕೊಂಡರು. ಅವರು ಲ್ಯಾಬ್-ನಿರ್ಮಿತ mRNA ಗೆ ಈ ಬದಲಾವಣೆಗಳನ್ನು ಸೇರಿಸಿದಾಗ, ಉರಿಯೂತ ದೂರವಾಯಿತು. ಔಷಧಕ್ಕಾಗಿ mRNA ಅನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ತಮ್ಮ ಸಂಶೋಧನೆಗಳನ್ನು 2005 ರಲ್ಲಿ COVID-19 ಕ್ಕಿಂತ ಮುಂಚೆಯೇ ಅವರು ಪ್ರಕಟಿಸಿದರು.
mRNA ಲಸಿಕೆಗಳನ್ನು ವಾಸ್ತವಕ್ಕೆ ತಂದದ್ದು ಹೇಗೆ?
ಈ ಜ್ಞಾನದೊಂದಿಗೆ, ಸಂಶೋಧಕರು Zika ಮತ್ತು MERS-CoV ನಂತಹ ರೋಗಗಳಿಗೂ ಸಹ mRNA ಲಸಿಕೆಗಳನ್ನು ಅಭಿವೃದ್ಧಿಪಡಿಸಬಹುದು. COVID-19 ರೋಗ ಅಪ್ಪಳಿಸಿದಾಗ, ಲಸಿಕೆಗಳನ್ನು ಶರವೇಗದಲ್ಲಿ ತಯಾರಿಸಲು ಅವರು ಬೇಸ್-ಮಾರ್ಪಡಿಸಿದ mRNA ಅನ್ನು ಬಳಸಿದರು. ಡಿಸೆಂಬರ್ 2020 ರಲ್ಲಿ mRNA ಲಸಿಕೆಗಳಿಗೆ ಅನುಮೋದನೆ ಸಹ ಸಿಕ್ಕಿತು. ಈ ಲಸಿಕೆಗಳು COVID-19 ತಡೆಗಟ್ಟಲು ಸುಮಾರು 95% ಪರಿಣಾಮಕಾರಿ ಎಂದು ಸಾಬೀತಾಗಿದೆ.
mRNA ಲಸಿಕೆಗಳ ಭವಿಷ್ಯ
ಈ ತಂತ್ರಜ್ಞಾನವು ಲಸಿಕೆಗಳನ್ನು ವೇಗವಾಗಿ ತಯಾರಿಸಲು ಮತ್ತು ಇತರೆ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೆಲವು ವಿಧದ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು ಸಹ ಇದನ್ನು ಬಳಸಬಹುದು. ಕರಿಕೊ ಮತ್ತು ವೈಸ್‌ಮನ್‌ರ ಸಂಶೋಧನೆಯ mRNA ಲಸಿಕೆಗಳು ಅಸಂಖ್ಯಾತ ಜೀವಗಳನ್ನು ಉಳಿಸಿವೆ ಮತ್ತು COVID-19 ವಿರುದ್ಧದ ಯುದ್ಧದಲ್ಲಿ ನಮಗೆ ಶಕ್ತಿಯನ್ನು ನೀಡಿವೆ.
Follow WeGnana for more Science and Technology Updates
The post COVID-19 mRNA ಲಸಿಕೆ ಕಂಡುಹಿಡಿದ ವಿಜ್ಞಾನಿಗಳಿಗೆ Nobel Prize appeared first on WeGnana – Kannada Science and Technology News Updates.