Islamabad: ಶಾಂಘೈ ಸಹಕಾರ ಒಕ್ಕೂಟ (Shanghai Cooperation Organization-SCO) ಸರ್ಕಾರಗಳ ಮುಖ್ಯಸ್ಥರ ಮಂಡಳಿಯ 23ನೇ ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್.ಜೈಶಂಕರ್ (Foreign Minister S.Jaishankar) ಮಂಗಳವಾರ ಪಾಕಿಸ್ತಾನದ (Pakistan) ರಾಜಧಾನಿ ಇಸ್ಲಾಮಾಬಾದ್ಗೆ ಆಗಮಿಸಿದರು. ಎಸ್ಸಿಒ ಸಿಎಚ್ಜಿ ಸಭೆ ಬುಧವಾರ ಬಿಗಿ ಭದ್ರತೆಯ ಮಧ್ಯೆ ಇಸ್ಲಾಮಾಬಾದ್‌ನಲ್ಲಿ ಪ್ರಾರಂಭವಾಗಲಿದೆ.
ಇಸ್ಲಾಮಾಬಾದ್‌ನಲ್ಲಿ ಶಾಂಘೈ ಸಹಕಾರ ಸಂಘಟನೆ (SCO) ನಾಯಕರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ (S Jaishankar) ಮತ್ತು ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ (Prime Minister Shehbaz Sharif) ಇಂದು ಅಪರೂಪದ ಹಸ್ತಲಾಘವ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡರು.
ಶೆಹಬಾಜ್ ಷರೀಫ್ ಹಾಗೂ ಸಚಿವ ಜೈಶಂಕರ್ ಕೆಲಸಮಯ ಮಾತುಕತೆ ನಡೆಸಿದ್ದಾರೆ. ವಿಶೇಷವೆಂದರೆ ಇದು 9 ವರ್ಷಗಳಲ್ಲಿ ಭಾರತದ ವಿದೇಶಾಂಗ ಸಚಿವರ ಮೊದಲ ಪಾಕಿಸ್ತಾನ ಭೇಟಿಯಾಗಿದೆ.
ಈ ಸಭೆಯಲ್ಲಿ ಒಕ್ಕೂಟದ ವ್ಯಾಪಾರ ಮತ್ತು ಆರ್ಥಿಕ ಕಾರ್ಯಸೂಚಿಯ ಮೇಲೆ ಪ್ರಮುಖವಾಗಿ ಚರ್ಚಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸಚಿವ ಜೈಶಂಕರ್ ಅವರು ಇಸ್ಲಾಮಾಬಾದ್‌ನಲ್ಲಿ ಭಾರತ-ಪಾಕಿಸ್ತಾನ ಸಂಬಂಧಗಳ ಬಗ್ಗೆ ಚರ್ಚಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಈ ಹಿಂದೆಯೇ ಸ್ಪಷ್ಟಪಡಿಸಿದೆ. ಎಸ್ಸಿಒದ ಪ್ರಮುಖ ಸದಸ್ಯನಾಗಿ ಮಾತ್ರ ನಾನು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದೇನೆ ಎಂದು ಜೈಶಂಕರ್ ಒತ್ತಿ ಹೇಳಿದ್ದಾರೆ.
ದೇಶ-ವಿದೇಶಗಳ ನೂರಾರು ಗಣ್ಯವ್ಯಕ್ತಿಗಳು ಇಸ್ಲಾಮಾಬಾದ್ಗೆ ಆಗಮಿಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.
ಶೃಂಗಸಭೆಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಭೆ ನಡೆಯುವ ಸ್ಥಳ, ಪ್ರಮುಖ ಸರ್ಕಾರಿ ಕಟ್ಟಡಗಳು ಮತ್ತು ಕೆಂಪು ವಲಯ ಪ್ರದೇಶವನ್ನು ರಕ್ಷಿಸಲು ಪಾಕಿಸ್ತಾನ ಸೇನೆಯನ್ನು ನಿಯೋಜಿಸಲಾಗಿದೆ.