Sidlaghatta, Chikkaballapur District : ಶಿಡ್ಲಘಟ್ಟ ನಗರಸಭೆ ಅಧ್ಯಕ್ಷೆ JDS ನ ಸುಮಿತ್ರ ರಮೇಶ್ ವಿರುದ್ದ ಬುಧವಾರ ನಗರಸಭೆ ಸಭಾಂಗಣದಲ್ಲಿ (City Municipal Council) ಕರೆದಿದ್ದ ಅವಿಶ್ವಾಸ ಮಂಡನೆಗಾಗಿನ (No Confidence Motion) ವಿಶೇಷ ಸಾಮಾನ್ಯ ಸಭೆಯಲ್ಲಿ ಅವಿಶ್ವಾಸ ಮಂಡನೆ ಪ್ರಕ್ರಿಯೆಯೇ ನಡೆಯಲಿಲ್ಲ.
ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದ್ದ ನಗರಸಭೆ ಅಧ್ಯಕ್ಷರ ವಿರುದ್ದದ ಅವಿಶ್ವಾಸ ನಿರ್ಣಯ ಮಂಡನೆ ಸಭೆಯ ಪ್ರಕರಣ ಇದೀಗ ಜಿಲ್ಲಾಧಿಕಾರಿಗಳ (Deputy Commissioner) ಅಂಗಳಕ್ಕೆ ಸರಿದಿದೆ.
ಸುಮಿತ್ರರಮೇಶ್ ಅವರೆ ಅಧ್ಯಕ್ಷೆಯಾಗಿ ಮುಂದುವರೆಯುತ್ತಾರಾ ಅಥವಾ ಉಪಾಧ್ಯಕ್ಷ ಅಫ್ಸರ್‌ಪಾಷ ಅವರು ಹಂಗಾಮಿ ಅಧ್ಯಕ್ಷರಾಗುವರಾ ಎನ್ನುವ ಜಿಜ್ಞಾಸೆ ನಾಗರಿಕರಲ್ಲಿ ಮೂಡಿದ್ದರೆ JDS, Congress, BSP, BJP ಹಾಗೂ ಪಕ್ಷೇತರ ಸದಸ್ಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಅಧ್ಯಕ್ಷೆ ಸುಮಿತ್ರ ರಮೇಶ್ ವಿರುದ್ಧವೇ ನಡೆಯಬೇಕಿದ್ದ ಅವಿಶ್ವಾಸ ಮಂಡನೆಯ ಸಭೆ ಇದಾಗಿತ್ತಾದ್ದರಿಂದ ಉಪಾಧ್ಯಕ್ಷ ಅಪ್ಸರ್‌ಪಾಷ ಅಧ್ಯಕ್ಷತೆಯಲ್ಲಿ ಅವಿಶ್ವಾಸ ಮಂಡನೆಯ ಸಭೆ ಆರಂಭವಾಗಿದ್ದು ಎಲ್ಲ 31 ಸದಸ್ಯರು, ಸಂಸತ್ ಸದಸ್ಯ ಎಸ್.ಮುನಿಸ್ವಾಮಿ (S. Muniswamy) , ಶಾಸಕ ವಿ.ಮುನಿಯಪ್ಪ (V. Muniyappa) ಸಹ ಸಭೆಗೆ ಹಾಜರಾಗಿದ್ದರು.
ಅವಿಶ್ವಾಸ ಮಂಡನೆಯ ಪ್ರಕ್ರಿಯೆಯನ್ನು ಆರಂಭಿಸುವಂತೆ ಬಿಜೆಪಿಯ ರಘು ಹಾಗೂ ಸುಮಿತ್ರ ರಮೇಶ್ ಅವರ ಜೆಡಿಎಸ್ ಪಕ್ಷದ ಬೆಂಬಲಿಗರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.
ಈ ವೇಳೆ ಅವಿಶ್ವಾಸ ಮಂಡನೆ ಮಾಡಲು ಮನವಿ ಸಲ್ಲಿಸಿದ್ದ ಕಾಂಗ್ರೆಸ್, ಬಿಎಸ್ಪಿ ಹಾಗೂ ಇತರೆ 19 ಸದಸ್ಯರು, ಅವಿಶ್ವಾಸ ಮಂಡನೆ ಮಾಡಲು ಅವಕಾಶ ಕೋರಿ ಜ.3 ರಂದು ನಾವು ಮನವಿ ಸಲ್ಲಿಸಿದ 15 ದಿನಗಳೊಳಗೆ ಸಭೆಯನ್ನು ಕರೆಯಲು ಅಧ್ಯಕ್ಷೆ ಸುಮಿತ್ರ ರಮೇಶ್ ವಿಫಲರಾಗಿದ್ದಾರೆ. ಹಾಗಾಗಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರ ರಮೇಶ್ ಮುಂದುವರೆಯಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಅವರ ವಿರುದ್ದ ಅವಿಶ್ವಾಸ ಮಂಡಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಾದಿಸಿದ್ದರಿಂದ ಅವಿಶ್ವಾಸ ಮಂಡಿಸುವ ಪ್ರಕ್ರಿಯೆ ನಡೆಯಲೇ ಇಲ್ಲ.
ಈ ನಡುವೆ ಸಭೆಯಲ್ಲಿದ್ದ ಸಂಸತ್ ಸದಸ್ಯ ಎಸ್.ಮುನಿಸ್ವಾಮಿ ಅವರು ಮಾತನಾಡಿ, ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್ ಅವರು ಕಾಲ ಕಾಲಕ್ಕೆ ಸಾಮಾನ್ಯ ಸಭೆಯನ್ನು ಕರೆಯುವಲ್ಲಿ ವಿಫಲರಾಗಿದ್ದಾರೆ, ಪರಿಶಿಷ್ಟ ಜಾತಿ ಪಂಗಡದವರಿಗೆ ಸಂಬಂಧಿಸಿದ ಸಭೆಗಳನ್ನು ಸಹ ಸಮಪರ್ಕವಾಗಿ ನಡೆಸದೆ ವಿಫಲರಾಗಿದ್ದಾರೆ ಎನ್ನುವ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಬಂದಿದ್ದು ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಅನರ್ಹರಾಗಿದ್ದಾರೆ ಎಂದು ಸಭೆಯಲ್ಲಿ ದಾಖಲಿಸಿದ್ದಾರೆ.
ಸಭೆಯಲ್ಲಿ ಅವಿಶ್ವಾಸ ನಿರ್ಣಯದ ಪರ ಹಾಗೂ ವಿರೋಧ ಹೇಳಿಕೆಗಳನ್ನು ದಾಖಲೆ ಮಾಡಲಾಯಿತು. ಕಾನೂನಿನ ರೀತ್ಯಾ ಎರಡೂ ಕಡೆಯವರ ಅಭಿಪ್ರಾಯಗಳನ್ನು, ಹೇಳಿಕೆಗಳನ್ನು ದಾಖಲೆ ಮಾಡಿದ ನಂತರ ಈ ಬಗ್ಗೆ ಕೈ ಎತ್ತಿ ವಿಶ್ವಾಸ ಅವಿಶ್ವಾಸ ನಿರ್ಣಯ ಮಾಡಬೇಕು ಎಂಬ ನಿಯಮದ ಪಾಲನೆ ಆಗಲೇ ಇಲ್ಲ. ಗೊಂದಲಮಯ ವಾತಾವರಣದಲ್ಲಿ ಸಭೆ ನಡೆದು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗದ ಕಾರಣ ಸಭೆಯ ನಡವಳಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ತೀರ್ಮಾನಕ್ಕೆ ಬರಲಾಯಿತು.
ಸಭೆಯಲ್ಲಿ ಶಾಸಕ ವಿ.ಮುನಿಯಪ್ಪರವರು ಹಾಗೂ ಸಂಸದ ಮುನಿಸ್ವಾಮಿರವರ ಸಮ್ಮುಖದಲ್ಲಿ ಜೆಡಿಎಸ್ ಸದಸ್ಯರನ್ನು ಕುರ್ಚಿಯಿಂದ ಎಳೆದು ಹಲ್ಲೆ ನಡೆದರೂ ತುಟಿ ಬಿಚ್ಚಲಿಲ್ಲವೆಂದು ಸುಮಿತ್ರ ರಮೇಶ್ ಮತ್ತು ಬಿಜೆಪಿ ಸದಸ್ಯ ರಾಘವೇಂದ್ರ ಆರೋಪವನ್ನು ಮಾಡಿ ಈ ಬಗ್ಗೆ ತಾವು ವೀಡಿಯೋ ಮಾಡಿದ್ದು ಕರ್ತವ್ಯ ನಿರತ ಸದಸ್ಯನ ಮೇಲೆ ಹಲ್ಲೆ ಮಾಡಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆ ಮಾಡುವುದಾಗಿ ತಿಳಿಸಿದರು. ಈ ಬಗ್ಗೆ ಪೌರಾಯುಕ್ತ ಶ್ರೀಕಾಂತ್‍ರವರು ಮಾತನಾಡಿ ತಮ್ಮ ಸಮ್ಮುಖದಲ್ಲಿ ಹಲ್ಲೆ ನಡೆದಿಲ್ಲವೆಂದು ಈ ಬಗ್ಗೆ CCTV ಕ್ಯಾಮೆರ ಮತ್ತು ವೀಡಿಯೋ ನೋಡಿದ ನಂತರವಷ್ಟೇ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು.
ಅಧ್ಯಕ್ಷೆ ಸುಮಿತ್ರರಮೇಶ್ ಅವರ ವಿರುದ್ದ ಅವಿಶ್ವಾಸ ಮಂಡನೆ ಮಾಡುವ ಕುರಿತು ವಾದ ವಿವಾದ ನಂತರ ಅಂತಿಮವಾಗಿ ಅವಿಶ್ವಾಸ ಮಂಡನೆಯ ಪ್ರಕ್ರಿಯೆಯನ್ನು ನಡೆಸದೆ ಉಪಾಧ್ಯಕ್ಷ ಅಫ್ಸರ್‌ಪಾಷ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿ ಕೈಗೊಂಡ ಸಭೆಯ ನಿರ್ಣಯವನ್ನು ಪೌರಾಯುಕ್ತ ಆರ್.ಶ್ರೀಕಾಂತ್ ಅವರು ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದಾರೆ.
ಜಿಲ್ಲಾಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸುಮಿತ್ರರಮೇಶ್ ಅವರೆ ಅಧ್ಯಕ್ಷರಾಗಿ ಮುಂದುವರೆಯುತ್ತಾರಾ ಇಲ್ಲವೇ ಹಂಗಾಮಿ ಅಧ್ಯಕ್ಷರಾಗಿ ಅಪ್ಸರ್‌ಪಾಷ ಅವರು ಮುಂದುವರೆಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.