Anekal, Bengaluru Rural : 26 ವರ್ಷಗಳ ಕಾಲ ಆನೇಕಲ್ ತಾಲ್ಲೂಕಿನ ಮರಸೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ (Marasuru Government School) ದೈಹಿಕ ಶಿಕ್ಷಕರಾಗಿ (Physical Trainer) ಕೆಲಸ ಮಾಡಿ ನಿವೃತ್ತ (Retirement) ಹೊಂದಿದ್ದ ಡಿ.ಎನ್.ವೀರಭದ್ರಪ್ಪ ಅವರನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಪುಷ್ಪವೃಷ್ಠಿ ಮಾಡುವ ಮೂಲಕ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಮತ್ತು ಸವ್ಯಸಾಚಿ ಗೆಳೆಯರ ಬಳಗದವರು ಅಭಿನಂದಿಸಿದ್ದರು.
ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರಾಗಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಡಿ.ಎನ್.ವೀರಭದ್ರಪ್ಪ ದೈಹಿಕ ಶಿಕ್ಷಕರಾಗಿ ನೇಮಕ ಗೊಂಡರೂ ಕನ್ನಡ, ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ವಿಷಯ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕರಾಗಿದ್ದರು. ದಾನಿಗಳ ನೆರವಿನಿಂದ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದರು.
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಡಿ.ಎನ್.ವೀರಭದ್ರಪ್ಪ ” ಸಮಾಜ ಕಟ್ಟುವ ಕಾರ್ಯಕ್ಕೆ ಅತ್ಯಂತ ಸಮರ್ಥ ಹುದ್ದೆ ಶಿಕ್ಷಕ ವೃತ್ತಿ ಅಂತಹ ಸೇವೆ ಮಾಡುವುದು ಪುಣ್ಯದ ಕೆಲಸ. ಒಂದೇ ಶಾಲೆಯಲ್ಲಿ 26 ವರ್ಷ ಕಾರ್ಯನಿರ್ವಹಿಸಿದ್ದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಹೆಚ್ಚಿನ ಒಡನಾಟ ಸಾಧ್ಯವಾಯಿತು. ಶಾಲೆಗೆ ಬರುತ್ತಿದ್ದ ಎಲ್ಲ ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ಕುಟುಂಬದ ಮಾಹಿತಿ ಪಡೆದು ಅವರಿಗೆ ಅವಶ್ಯಕವಾದ ನೆರವು ನೀಡಿದ್ದರಿಂದ ಮಡಿವಾಳದಲ್ಲಿ ಇಬ್ಬರು ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆದು ಉತ್ತಮ ಉದ್ಯೋಗದಲ್ಲಿದ್ದಾರೆ. ಹಲವು ಮಂದಿ ಪದವೀಧರರಾಗಿ ಉತ್ತಮ ಉದ್ಯೋಗದಲ್ಲಿದ್ದಾರೆ” ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾ ವೆಂಕಟಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪುರುಷೋತ್ತಮರೆಡ್ಡಿ, ಸವ್ಯಸಾಚಿ ಗೆಳೆಯರ ಬಳಗದ ಅಧ್ಯಕ್ಷ ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಕಲಾ, ಕೃಷ್ಣಪ್ಪ, ಮಣಿಕಂಠ, ಅಳ್ಳಹಳ್ಳಿ ಮುನಿಯಮ್ಮ, ನಾಗರಾಜು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮುರಳಿ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕರಾದ ಜಿ.ಗುರುಮೂರ್ತಿ, ವಿಮಲಮ್ಮ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಮರೇಶ್, ಉಪಾಧ್ಯಕ್ಷ ಆರ್.ಶ್ರೀನಿವಾಸ್, ಮುಖಂಡರಾದ ಅನಿಲ್‌ಕುಮಾರ್, ಸೋಮಶೇಖರ್, ಡಾ.ಚಂದ್ರಶೇಖರ್, ವೆಂಕಟಸ್ವಾಮಿ, ಮಂಜುನಾಥ್, ಅಶೋಕ್, ಜೇನುಗೂಡು ಸಾಹಿತ್ಯ ವೇದಿಕೆ ಮಹೇಶ್ ಊಗಿನಹಳ್ಳಿ, ಚುಟುಕು ಶಂಕರ್, ಗಾಯಕ ರಾಜೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.