Kolar : ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಭಗ್ನಗೊಳಿಸಿದ ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ (Karnataka Rashana Vedike) ಸದಸ್ಯರು ಕೋಲಾರದ ಟಮಕ ಬಡಾವಣೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರಾಘವೇಂದ್ರ ಮಾತನಾಡಿ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಮರಾಠ ಮಹಾಮೇಳಕ್ಕೆ ಸರ್ಕಾರ ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕೆ ಎಂಇಎಸ್ ಪುಂಡರು ಕನ್ನಡ ಬಾವುಟ ಸುಟ್ಟು ಅವಮಾನಿಸಿದ್ದಾರೆ. ಗಡಿ ವಿಚಾರವಾಗಿ ಶಿವಸೇನೆ ಕಾರ್ಯಕರ್ತರು ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ಹೆಚ್ಚಾಗುತ್ತಿದೆ. MES ಸಂಘಟನೆಯನ್ನು ನಿಷೇಧಿಸಲು ಸರ್ಕಾರ ಕಾನೂನು ರೂಪಿಸಿ ಪುಂಡಾಟಿಕೆ ನಡೆಸಿರುವ ಕಿಡಿಗೇಡಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು” ಎಂದು ಹೇಳಿದರು.
ಸಂಘಟನೆಯ ಪದಾಧಿಕಾರಿಗಳಾದ ಡಿ.ಕೆ.ಪ್ರಭಾಕರ್‌ಗೌಡ, ವಿ.ಮುನಿರಾಜು, ಮೆಹಬೂಬ್, ಭಾಗ್ಯಲಕ್ಷ್ಮಿ, ಗೋವಿಂದಪ್ಪ, ಸತೀಶ್‌ಗೌಡ, ಲೋಕೇಶ್, ಚಂದ್ರು, ರಾಮ್‌ಪ್ರಸಾದ್, ಪಿ.ಸುರೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡರು.