
Maharashtra: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Maharashtra Chief Minister Devendra Fadnavis) ಅವರ ಕಚೇರಿಗೆ ಪಾಕಿಸ್ತಾನಿ ಸಂಖ್ಯೆಯಿಂದ ಬಾಂಬ್ ಇಡುವುದಾಗಿ ಬೆದರಿಕೆ ಕರೆ ಬಂದಿದೆ. ಈ ಕುರಿತು ಮಾಹಿತಿ ಲಭ್ಯವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಾಕಿಸ್ತಾನದ ಸಂಖ್ಯೆಯಿಂದ ಮುಂಬೈನ ವರ್ಲಿ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಈ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಈ ಘಟನೆ ಭದ್ರತಾ ಕಳವಳಕ್ಕೆ ಕಾರಣವಾಗಿದ್ದು, ಮುಂಬೈ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂದೇಶದ ಮೂಲ ಮತ್ತು ಅದರ ನಿಜಾಸತ್ಯವನ್ನು ಪತ್ತೆಹಚ್ಚಲು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಸಿಎಂ ಕಚೇರಿ ಹಾಗೂ ಇತರ ಪ್ರಮುಖ ಸರ್ಕಾರಿ ಕಟ್ಟಡಗಳ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಂಬೈ ಸಂಚಾರ ಪೊಲೀಸರಿಗೆ ಈ ಬೆದರಿಕೆ ವಾಟ್ಸಾಪ್ ಸಂದೇಶದ ಮೂಲಕ ಬಂದಿದೆ. ಈ ಸಂದೇಶವನ್ನು ಕಳುಹಿಸಿದ ವ್ಯಕ್ತಿ ತನ್ನ ಹೆಸರನ್ನು ಮಲಿಕ್ ಶಹಬಾಜ್ ಹುಮಾಯೂನ್ ರಾಜಾ ದೇವ್ ಎಂದು ಹೇಳಿಕೊಂಡಿದ್ದಾನೆ.
ಈ ಹಿಂದೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೂ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. 2022ರಲ್ಲಿ ಪಾಕಿಸ್ತಾನಿ ಸಂಖ್ಯೆಯಿಂದ ಮುಂಬೈ ಪೊಲೀಸರಿಗೆ 26/11 ತರಹದ ದಾಳಿಯ ಬೆದರಿಕೆ ಸಂದೇಶವೂ ಕಳುಹಿಸಲಾಗಿತ್ತು.
ಈ ಘಟನೆ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆ ಮುಂದುವರೆದಿದೆ.