
Nelamangala: ಬೆಂಗಳೂರು ನಗರದಲ್ಲಿರುವ ಖ್ಯಾತ ಆಚಾರ್ಯ ಕಾಲೇಜಿಗೆ ಬಾಂಬ್ ಇಟ್ಟಿದ್ದೇವೆ (Bomb threat to Acharya College) ಎಂಬ ಇ-ಮೇಲ್ ಬಂದಿದ್ದು ಆತಂಕ ಸೃಷ್ಟಿಸಿದೆ. ಅನಾಮಿಕ ವ್ಯಕ್ತಿಯೊಬ್ಬನು ಈ ಬೆದರಿಕೆ ಸಂದೇಶ ಕಳುಹಿಸಿದ್ದು, “ಕಾಲೇಜು ಪ್ರಾಂಶುಪಾಲರನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಡುತ್ತೇವೆ” ಎಂಬ ಶೋಕಾಜನಕ ಮಾತು ಕೂಡ ಇ-ಮೇಲ್ ನಲ್ಲಿ ಇದೆ.
ಕಾಲೇಜಿನ ಅಧಿಕೃತ ಇ-ಮೇಲ್ ಪರಿಶೀಲನೆ ಮಾಡುವಾಗ ಈ ಸಂದೇಶ ಪತ್ತೆಯಾಯಿತು. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ತಕ್ಷಣವೇ ಸೋಲದೇವನಹಳ್ಳಿ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಮೊದಲು ಎನ್‌ಸಿಆರ್ ದಾಖಲಿಸಿ ನಂತರ ನ್ಯಾಯಾಲಯದ ಅನುಮತಿ ಪಡೆದು FIR ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ.
ಈ ಘಟನೆ ಎರಡು ದಿನಗಳ ಹಿಂದೆ ನಡೆದ ಮತ್ತೊಂದು ಬಾಂಬ್ ಬೆದರಿಕೆಗೆ ಹೋಲಿಕೆಯಾಗುತ್ತಿದೆ. ವಾರಣಾಸಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂದು ಒಂದು ಸುಳ್ಳು ಮಾಹಿತಿಯ ನಂತರ, ಇಂತಹ ಇನ್ನೊಂದು ಬೆದರಿಕೆ ಬಂದಿರುವುದು ಆತಂಕಕಾರಿ.
ಅದೇ ವಿಮಾನದಲ್ಲಿ ಇದ್ದ ಕೆನಡಾದ ಪ್ರಜೆ ನಿಶಾಂತ್ ಯೋಹಾಂತನ್ ಎನ್ನುವವರು ತಮ್ಮ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಕೂಗಿದ್ದರಿಂದ ವಿಮಾನವನ್ನು ತುರ್ತಾಗಿ ನಿಲ್ಲಿಸಿ ಪರಿಶೀಲನೆ ಮಾಡಲಾಯಿತು. ನಂತರ ಅದು ಹುಸಿ ಬೆದರಿಕೆಯಾಗಿರುವುದು ತಿಳಿಯಿತು.
ಇತ್ತೀಚೆಗೆ ಬೆಂಗಳೂರು ಸೇರಿದಂತೆ ದೇಶದ ಇತರ ಪ್ರಮುಖ ನಗರಗಳಲ್ಲೂ ಹೀಗೇ ಹುಸಿ ಬಾಂಬ್ ಬೆದರಿಕೆಗಳು ಹೆಚ್ಚಾಗುತ್ತಿವೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಚೇರಿ ಮತ್ತು ನಿವಾಸ, ಕೊಚ್ಚಿ ವಿಮಾನ ನಿಲ್ದಾಣಕ್ಕೂ ಇತ್ತೀಚೆಗೆ ಇಂಥ ಇ-ಮೇಲ್ ಬೆದರಿಕೆಗಳು ಬಂದಿವೆ.